ಮುಂಬೈ(ಮಹಾರಾಷ್ಟ್ರ): ಬಿಜೆಪಿಗೆ ದೇಶದಲ್ಲಿ ಹಿಂದುತ್ವದ ಪರವಾದ ಯಾವುದೇ ಪಕ್ಷ ಬೇಡ. ಹೀಗಾಗಿ ಶಿವಸೇನೆಯನ್ನು ಕೊನೆಗಾಣಿಸಲು ಷಡ್ಯಂತ್ರ ರೂಪಿಸಲಾಗುತ್ತಿದೆ. ದೇಶದ್ರೋಹಿಗಳು ಬೆನ್ನಿಗೆ ಚೂರಿ ಹಾಕಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಆದರೆ, ನಾನು ಮೂರ್ಖನಲ್ಲ. ರಕ್ತ ಹರಿಸಿ ಹೊಸ ಶಿವಸೇನೆಯನ್ನು ಕಟ್ಟುತ್ತೇನೆ ಎಂದು ಮುಖ್ಯಮಂತ್ರಿ ಹಾಗೂ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದರು.
ಶಿವಸೇನೆ ಹೆಸರು ಬಳಸದೆ ರಾಜಕೀಯ ಮಾಡಬಲ್ಲಿರಾ?: ಠಾಕ್ರೆ ಹೆಸರನ್ನು ಬಳಸದೇ ನೀವು ರಾಜಕೀಯದಲ್ಲಿ ಉಳಿಯಲು ಸಾಧ್ಯವೇ?, ತಾಕತ್ತಿದ್ದರೆ ಠಾಕ್ರೆ ಹಾಗೂ ಶಿವಸೇನೆಯ ಹೆಸರನ್ನು ಬಿಟ್ಟು ಹೊರೆಗೆ ಹೋಗಿ ಎಂದು ಬಂಡಾಯ ನಾಯಕ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸವಾಲೆಸೆದಿದ್ದಾರೆ. ಸಿಎಂ ಅಧಿಕೃತ ನಿವಾಸ ತೊರೆದು ಅಧಿಕಾರದ ಲೋಭ ತ್ಯಜಿಸಿದ್ದೇನೆ. ಆದರೆ, ಮಹಾರಾಷ್ಟ್ರದ ರಾಜಕೀಯ ಬಿಕ್ಕಟಿನ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಠಾಕ್ರೆ ಸ್ಪಷ್ಟಪಡಿಸಿದ್ದಾರೆ.
ನಾವು ರಾಜಕೀಯದಲ್ಲಿ ಮುನ್ನಡೆಯುತ್ತಿದ್ದೇವೆ. ಈಗ ಪರಿಸ್ಥಿತಿ ಭಿನ್ನವಾಗಿದೆ. ನನಗೆ ದ್ರೋಹಿಗಳು ಬೇಡ ಎಂದು ಶಿವಸೇನೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹೇಳಲಾಗಿದೆ. ಕಾಂಗ್ರೆಸ್ - ಎನ್‌ಸಿಪಿ ಬೆನ್ನಿಗೆ ಚೂರಿ ಹಾಕಲಿದೆ ಎಂದು ಕೆಲವರು ಹೇಳುತ್ತಿದ್ದರು. ಆದರೆ, ಇಂದು ಪವಾರ್ ಸಾಹೇಬ್ ಮತ್ತು ಸೋನಿಯಾ ಗಾಂಧಿ ಅವರ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದಾರೆ. ಆದರೆ, ಆಪ್ತರು ಬಿಟ್ಟು ಹೋಗಿದ್ದಾರೆ ಎಂದು ಠಾಕ್ರೆ ಅಳಲು ತೋಡಿಕೊಂಡರು.
ಶಿವಸೇನೆಯನ್ನು ಕೊನೆಗಾಣಿಸಲು ಯತ್ನ: ಬಾಳಾಸಾಹೇಬರು ಹೇಳಿದಂತೆ ನಾನು ಹುಚ್ಚನಾಗುವುದಿಲ್ಲ. ನೀವು ಪಕ್ಷವನ್ನು ನಡೆಸಲು ಅಸಮರ್ಥರಾಗಿದ್ದರೆ, ಶಿವಸೇನೆ ಮುಖ್ಯಸ್ಥರು ನಿಮಗೆ ಮಾಡಿದ ಮನವಿಯನ್ನು ಮರೆತುಬಿಡಿ. ನಾನು ಶಿವಸೇನೆ ನಡೆಸುವುದು ಸರಿಯಿಲ್ಲ ಎಂದು ನಿಮಗೆ ಅನಿಸಿದರೆ, ಹೇಳಿ. ನಾನು ಈಗ ಶಿವಸೇನೆ ಪಕ್ಷದ ಮುಖ್ಯಸ್ಥ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ. ಯಾರಾದರೂ ಈ ಶಿವಸೇನೆಯನ್ನು ಮುಂದಕ್ಕೆ ಕೊಂಡೊಯ್ಯಿರಿ. ಶಿವಸೇನೆ ಒಂದು ಕಲ್ಪನೆ ಮತ್ತು ಬಿಜೆಪಿ ಅದನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಠಾಕ್ರೆ ಆರೋಪಿಸಿದರು.
ಶಿವಸೇನೆ ಶಾಸಕರ ಬಂಡಾಯ ಬಿಜೆಪಿ ಹುನ್ನಾರ: ಉದ್ಧವ್ ಠಾಕ್ರೆ ಅವರನ್ನು ಏಕಾಂಗಿಯಾಗಿ ಬಿಡಬೇಕು ಎಂಬುದು ಬಿಜೆಪಿಯ ಗುರಿ. ಆದರೆ ಚುನಾಯಿತರಾದ ಶಿವಸೇನೆಯ ನಾಯಕರನ್ನು ಒಡೆಯಲು ಸಾಧ್ಯವಿಲ್ಲ. ಹಾಗೆಯೇ ನಾವು ಹಿಂದುತ್ವವನ್ನು ಬಿಟ್ಟಿಲ್ಲ. ಏಕನಾಥ್ ಶಿಂಧೆ ಅವರಿಗೆ ನಾನೇನು ದ್ರೋಹ ಮಾಡಿಲ್ಲ. ನಗರಾಭಿವೃದ್ಧಿ ಸಚಿವರಂತಹ ದೊಡ್ಡ ಖಾತೆ ನೀಡಲಾಗಿತ್ತು. ಆದರೆ ಶಿವಸೇನೆ ಶಾಸಕರ ಬಂಡಾಯ ಬಿಜೆಪಿಯ ಹುನ್ನಾರ. ಯಾರೂ ಇಲ್ಲದಿದ್ದರೂ ಮುಂಬರುವ ಚುನಾವಣೆಯಲ್ಲಿ ಶಿವಸೇನೆ ಮತ್ತೆ ಎದ್ದು ನಿಂತು ಗೆಲ್ಲುತ್ತದೆ ಎಂದು ಠಾಕ್ರೆ ವಿಶ್ವಾಸ ವ್ಯಕ್ತಪಡಿಸಿದರು.
ಹೊಸ ಶಿವಸೇನೆಯನ್ನು ಕಟ್ಟುತ್ತೇನೆ: ಉಜ್ವಲ ಭವಿಷ್ಯಕ್ಕಾಗಿ ನಿರ್ಧರಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ನನ್ನನ್ನು ಮತ್ತು ಬಾಳಾಸಾಹೇಬರ ಚಿತ್ರವನ್ನು ನೋಡಿ ಯಾರೂ ಭಾವುಕರಾಗಬೇಡಿ. ಯಾರೂ ಇಲ್ಲದಿದ್ದರೂ ಶಿವಸೇನೆಯನ್ನು ಮತ್ತೆ ಕಟ್ಟುವ ಸಂಕಲ್ಪ ಮಾಡಿದ್ದೇನೆ. ಶಿವಸೇನೆಯನ್ನು ಮರುಸ್ಥಾಪಿಸಲು ಬಯಸುವವರು ಅವರೊಂದಿಗೆ ಉಳಿಯಬೇಕು. ಮರದ ಎಲೆಗಳು, ಹೂವುಗಳು ಮತ್ತು ಹಣ್ಣುಗಳು ಉದುರಿ ಹೋದರೂ ಮರವು ಮತ್ತೆ ಬೆಳೆಯುತ್ತದೆ. ಏಕೆಂದರೆ ಅದರ ಬೇರುಗಳು ದೃಢವಾಗಿರುತ್ತವೆ. ಬಾಳಾಸಾಹೇಬರ ಶಿವಸೈನಿಕರು ಶಿವಸೇನೆಯ ಬೇರುಗಳು ಎಂದರು.
ಇದನ್ನೂ ಓದಿ: ಅಂತಿಮವಾಗಿ ರಾಜಕೀಯ ಮಹಾ ಆಟ ಶುರು: 16 ಶಾಸಕರ ಅನರ್ಹತೆಗೆ ಉಪಸಭಾಧ್ಯಕ್ಷರಿಂದ ನೋಟಿಸ್