ರಾಂಪುರ (ಯುಪಿ): ಉತ್ತರಪ್ರದೇಶ ಮತ್ತು ಉತ್ತರಾಖಂಡದ ಗಡಿಯಲ್ಲಿರುವ ರಾಂಪುರ ಹಾಗೂ ರಾಜ್ಪುರ ಗ್ರಾಮಕ್ಕೆ ಈವರೆಗೆ ವಿದ್ಯುತ್ ಸಂಪರ್ಕವಿಲ್ಲ. ಉತ್ತರಪ್ರದೇಶದ ಸರ್ಕಾರ ವಿದ್ಯುತ್ ಪೂರೈಸದ ಕಾರಣ, ಉತ್ತರಾಖಂಡ ಸರ್ಕಾರ ಇಲ್ಲಿನ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.
2018 ರಲ್ಲಿ ಉತ್ತರ ಪ್ರದೇಶ ವಿದ್ಯುತ್ ಇಲಾಖೆ ಅಧಿಕಾರಿಗಳು ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಿದರು. ಆದರೆ, ಈವರೆಗೆ ವಿದ್ಯುತ್ ಮಾತ್ರ ಪೂರೈಸುತ್ತಿಲ್ಲ. ಹಾಗಾಗಿ ಉತ್ತರಾಖಂಡ ಸರ್ಕಾರ ವಿದ್ಯುತ್ ಪೂರೈಸುತ್ತಿದೆ. ಆದರೆ, ಇಲ್ಲಿನ ನಿವಾಸಿಗಳು ಎರಡೂ ರಾಜ್ಯಗಳಿಂದ ವಿದ್ಯುತ್ ಬಿಲ್ ಪಡೆಯುತ್ತಾರೆ ಅನ್ನೋದೇ ಅಚ್ಚರಿಯ ಸಂಗತಿ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಲ್ಲಿನ ನಿವಾಸಿ ಸುಖ್ವಿಂದರ್ಸಿಂಗ್, ಉತ್ತರಪ್ರದೇಶ ಸರ್ಕಾರ ಕೇವಲ ಲೈಟ್ ಕಂಬಗಳನ್ನು ನಿರ್ಮಿಸಿದೆ. ಆದರೆ, ಉತ್ತರಾಖಂಡ ಸರ್ಕಾರ ನಮಗೆ ವಿದ್ಯುತ್ ಪೂರೈಸುತ್ತಿದೆ. ವಿದ್ಯುತ್ ಸರಬರಾಜು ಮಾಡದೆ ಯುಪಿ ಸರ್ಕಾರ ನಮ್ಮ ಮನೆಗಳಿಗೆ ಮೀಟರ್ ಅಳವಡಿಸಿ, ಬಿಲ್ ನೀಡುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಗಂಡನ ಮುಂದೆ ಹೆಂಡ್ತಿ ಮೇಲೆ ಗ್ಯಾಂಗ್ರೇಪ್; ಚಿನ್ನಾಭರಣ, ನಗದು ದೋಚಿ ಪರಾರಿ!
ರಾಂಪುರ್ ವಿದ್ಯುತ್ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಇಮ್ರಾನ್ ಪ್ರತಿಕ್ರಿಯಿಸಿ, ನಾನು ಅಧಿಕಾರಿಗಳ ಜತೆ ಮಾತನಾಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಹೇಳಿದ್ದಾರೆ. ತನಿಖೆಯ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ. ನಾವು ಯಾರ ಮೇಲೂ ಆರ್ಥಿಕವಾಗಿ ಶೋಷಣೆ ಎಸಗಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.