ಕೂಚ್‌ಬೆಹಾರ್ (ಪಶ್ಚಿಮ ಬಂಗಾಳ): ಪಶ್ಚಿಮಬಂಗಾಳದಲ್ಲಿ ಅಚ್ಚರಿಯ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ತೃಣಮೂಲ ಕಾಂಗ್ರೆಸ್ ನಾಯಕ ರವೀಂದ್ರನಾಥ ಘೋಷ್ ಎಂಬುವವರು ಬಿರಿಯಾನಿಯಲ್ಲಿ ಬಳಸಿದ ಮಸಾಲೆಗಳು ಪುರುಷರ ಲೈಂಗಿಕ ಶಕ್ತಿಯನ್ನು ಕುಂದಿಸುತ್ತವೆ ಎಂದು ಆರೋಪಿಸಿ ಸ್ಥಳೀಯ ಬಿರಿಯಾನಿ ಅಂಗಡಿಯೊಂದನ್ನೇ ಮುಚ್ಚಿಸಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಯಾಬಿನೆಟ್ನ ಮಾಜಿ ಸಚಿವ ರವೀಂದ್ರನಾಥ್ ಘೋಷ್ ಅವರ ಈ ಆರೋಪಕ್ಕೆ ಯಾವುದೇ ವೈದ್ಯಕೀಯ ಪುರಾವೆಗಳು ಇಲ್ಲದಿದ್ದರೂ, ಅಂಗಡಿಯನ್ನು ಬಂದ್ ಮಾಡಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಬಿರಿಯಾನಿ ಖಾದ್ಯವನ್ನು ತಯಾರಿಸಲು ಬಳಸುವ ಪದಾರ್ಥಗಳು ಮತ್ತು ಮಸಾಲೆಗಳು ಪುರುಷತ್ವವನ್ನು ನಾಶ ಮಾಡುತ್ತವೆ. ಹೀಗಾಗಿ ಇಲ್ಲಿ ಮಾರಾಟ ಮಾಡುತ್ತಿದ್ದ ಬಿರಿಯಾನಿ ಅಂಗಡಿಯನ್ನೇ ಮುಚ್ಚಿಸಲಾಗಿದೆ ಎಂದು ರವೀಂದ್ರನಾಥ್ ಘೋಷ್ ಹೇಳಿದ್ದಾರೆ.
ಪುರಸಭೆಯ ಪ್ರಕಾರ, ಕೂಚ್‌ಬೆಹಾರ್ ವ್ಯಾಪ್ತಿಯಲ್ಲಿ ಹಲವಾರು ಬಿರಿಯಾನಿ ಅಂಗಡಿಗಳು ಅಕ್ರಮವಾಗಿವೆ. ಈ ಅಂಗಡಿಗಳ ಪೈಕಿ ಮುಚ್ಚಲಾದ 'ಕೋಲ್ಕತ್ತಾ ಬಿರಿಯಾನಿ ಶಾಪ್' ವಿರುದ್ಧ ಪುರುಷರ ಲೈಂಗಿಕ ಶಕ್ತಿ ಕುಂದಿಸುವ ಪದಾರ್ಥಗಳನ್ನು ಬಳಸುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ ಎಂದು ಘೋಷ್ ಹೇಳಿದ್ದಾರೆ. ಆದರೆ, ಈ ಬಗ್ಗೆ ದೂರು ನೀಡಿದವರು ಯಾರು ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ.
ಓದಿ: ಮಗುವಿನೊಂದಿಗೆ ರೈಲು ಹಳಿಗೆ ಬಿದ್ದ ಮಹಿಳೆ.. ದೇವದೂತನಾದ ಲೋಕೊ ಪೈಲೆಟ್