ರಾಂಚಿ(ಜಾರ್ಖಂಡ್): ರಾಜ್ಯದಲ್ಲಿ ಹಕ್ಕಿಜ್ವರ ವೇಗವಾಗಿ ಹರಡುತ್ತಿದ್ದು, ಇದು ಸರ್ಕಾರಕ್ಕೆ ಆತಂಕ ತಂದೊಡ್ಡಿದರೆ, ಇನ್ನೊಂದೆಡೆ ಕೋಳಿ ಮಾಂಸವನ್ನು ಹೆಚ್ಚು ತಿನ್ನಬೇಕು ಎಂದು ರಾಜ್ಯ ಸರ್ಕಾರದ ಆರೋಗ್ಯ ಸಚಿವ ಬನ್ನಾ ಗುಪ್ತಾ ಹೇಳಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಂಚಿಯಲ್ಲಿ ಹಕ್ಕಿಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವರದಿಗಳು ಬರುತ್ತಲೇ ಇವೆ. ಪಶುಸಂಗೋಪನಾ ಇಲಾಖೆ ಆತಂಕಗೊಂಡು ಕೈಚೆಲ್ಲಿದೆ. ಇಂಥ ಸಂದರ್ಭದಲ್ಲಿ ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರ ಈ ಹೇಳಿಕೆ ಸರ್ಕಾರಕ್ಕೆ ಮುಜುಗರು ತಂದಿಟ್ಟಿದೆ. ಆರೋಗ್ಯ ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪವೂ ವ್ಯಕ್ತವಾಗಿದೆ. ಹೇಳಿಕೆ ಪರ ವಿರೋಧವಾಗಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಹೆಚ್ಚು ಕರಿದ ಚಿಕನ್ ತಿನ್ನುವಂತೆ ಸಲಹೆ: ವಿಧಾನಸೌಧದ ಆವರಣದಲ್ಲಿ ಆರೋಗ್ಯ ಸಚಿವ ಬನ್ನಾ ಗುಪ್ತಾ ಮಾಧ್ಯಮದವರೊಂದಿಗೆ ಮಾತನಾಡಿ , ಹಕ್ಕಿಜ್ವರದ ಬಂದಾಗಲೆಲ್ಲ ಚಿಕನ್ ಅನ್ನು ಹೆಚ್ಚು ತಿನ್ನುತ್ತೇವೆ. ಚಿಕನ್ ತಿನ್ನಿರಿ. ಆದರೆ ನೀವು ಅದನ್ನು ಹೆಚ್ಚು ಫ್ರೈ ಮಾಡಿ ತಿಂದರೆ, ಏನೂ ಆಗುವುದಿಲ್ಲ. ಆದರೂ ಹಕ್ಕಿಜ್ವರದ ಕೆಲ ಪ್ರಕರಣಗಳು ಬೆಳಕಿಗೆ ಬಂದಿವೆ. ಪಶುಸಂಗೋಪನೆ ಸಚಿವರು ಇದರ ಬಗ್ಗೆ ಗಮನ ಹರಿಸಲಿದ್ದಾರೆ ಎಂದು ಹೇಳಿದ್ದರು.
ನಾಲ್ಕು ಸಾವಿರಕ್ಕೂ ಹೆಚ್ಚು ಕೋಳಿ ಸಾವು: ಜಾರ್ಖಂಡ್‌ನಲ್ಲಿ ಹಕ್ಕಿ ಜ್ವರ ವೇಗವಾಗಿ ಹಬ್ಬುತ್ತಿದೆ. ಬೊಕಾರೊ ನಂತರ ಇದೀಗ ಹೆಚ್ಚಾಗಿ ರಾಂಚಿಯಲ್ಲಿ ಹಕ್ಕಿಜ್ವರದ ಪ್ರಕರಣಗಳು ಕಂಡು ಬಂದಿವೆ. ಹಕ್ಕಿಜ್ವರದಿಂದ ಬೊಕಾರೊದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಕೋಳಿಗಳು ಸಾವಿಗೀಡಾಗಿದ್ದವು.ಈಗಾಗಲೇ ಕೋಳಿ ಮಾರಾಟ ನಿಲ್ಲಿಸಲಾಗಿದೆ. ಕೋಳಿ ಫಾರಂಗಳ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ.
ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸರ್ಕಾರ ಸೂಚನೆ: ಮಾಹಿತಿ ಪ್ರಕಾರ, ರಾಂಚಿಯಲ್ಲಿ ವೇಗವಾಗಿ ಹರಡುತ್ತಿರುವ ಹಕ್ಕಿ ಜ್ವರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ಅವರಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಹಕ್ಕಿಜ್ವರ ನಿಯಂತ್ರಣ ಮತ್ತು ತಡೆಗೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಕಣ್ಗಾವಲು ವಲಯ ಪ್ರದೇಶ ಘೋಷಣೆ: ಹಕ್ಕಿಜ್ವರ ತಡೆಗೆ ಕಠಿಣ ಕ್ರಮ ಅಗತ್ಯವಿದೆ ಕೇಂದ್ರ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಕಳಿಸಿದ ಪತ್ರದಲ್ಲಿ ತಿಳಿಸಲಾಗಿದೆ. ಹಕ್ಕಿಜ್ವರ ಕಂಡು ಬಂದ ಪ್ರದೇಶದಿಂದ 10 ಕಿಲೋಮೀಟರ್ ಕಣ್ಗಾವಲು ವಲಯ ಪ್ರದೇಶ ಘೋಷಿಸುವ ಮೂಲಕ ಕೋಳಿಗಳ ಮೇಲೆ ಕಣ್ಣಿಡುವ ಅವಶ್ಯಕತೆಯಿದೆ ಎಂದು ಸೂಚಿಸಿದೆ.
ಹಕ್ಕಿ ಜ್ವರದ ಲಕ್ಷಣಗಳು: ತಜ್ಞರ ಪ್ರಕಾರ, ಮಾನವರಲ್ಲಿ ಹಕ್ಕಿಜ್ವರದ ಸೋಂಕು ಕಾಣಿಸಿಕೊಂಡ ಬಳಿಕ ತೀವ್ರವಾದ ನೋವು, ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಶೀತ ಮತ್ತು ಉಗುಳಿನಲ್ಲಿ ರಕ್ತವನ್ನು ಒಳಗೊಂಡಿರುತ್ತದೆ. ಇಂಥ ಭಯಾನಕ ಹಕ್ಕಿಜ್ವರ ಪರಿಸ್ಥಿತಿಯಲ್ಲಿ ಸರ್ಕಾರ ತಡೆಗೆ ಶ್ರಮಿಸುತ್ತಿರುವಾಗ, ಮತ್ತೊಂದೆಡೆ ಆರೋಗ್ಯ ಸಚಿವರ ಹೇಳಿಕೆ ಚರ್ಚೆಯಲ್ಲಿದೆ. H5N1, H7N9, H5N6 ಮಾದರಿಯ ಹಕ್ಕಿ ಜ್ವರದ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಕಂಡುಬಂದಿದ್ದು, ಇದರಿಂದ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ H5N1 ಸಾಮಾನ್ಯ ಮಾದರಿಯ ಹಕ್ಕಿ ಜ್ವರವಾಗಿದೆ. ಇದು ಮನುಷ್ಯರಲ್ಲಿ 1997ರಲ್ಲಿ ಪತ್ತೆ ಮಾಡಲಾಗಿದ್ದು, ಇದು ಪೀಡಿತರಲ್ಲಿ ಶೇ.60ರಷ್ಟು ಮಂದಿಯ ಪ್ರಾಣಕ್ಕೆ ಹಾನಿ ಉಂಟು ಮಾಡಿದೆ.
ಇದನ್ನೂಓದಿ:ಮಂಡ್ಯ - ರಾಮನಗರದಲ್ಲಿ ಪ್ರತ್ಯೇಕ ಘಟನೆ: ಎರಡು ತೆಂಗಿನ ನಾರು ಕಾರ್ಖಾನೆಗಳು ಸುಟ್ಟು ಕರಕಲು