ನವದೆಹಲಿ: ಕೋಳಿ ಮಾರಾಟ ನಿಷೇಧವನ್ನು ಪುನರ್ ಪರಿಶೀಲಿಸಿ ಮತ್ತು ಸೋಂಕಿತವಲ್ಲದ ಪ್ರದೇಶಗಳಿಂದ ಕೋಳಿ ಉತ್ಪನ್ನಗಳ ಮಾರಾಟ ಸಂಬಂಧ ನಿರ್ಧಾರ ಕೈಗೊಳ್ಳುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ತಿಳಿಸಿದೆ.
ಹಕ್ಕಿಜ್ವರ ಹರಡುವಿಕೆ ಸಂಬಂಧಿಸಿದ ಅವೈಜ್ಞಾನಿಕ ವದಂತಿಗಳಿಗೆ ಗ್ರಾಹಕರು ಕಿವಿಗೊಡಬಾರದು ಎಂದು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ (ಎಫ್‌ಹೆಚ್‌ಡಿ) ಪ್ರಕಟಣೆಯಲ್ಲಿ ತಿಳಿಸಿದೆ. ಈಗಾಗಲೇ ಈ ನಿಷೇಧವು ಕೋಳಿ ಮತ್ತು ಮೊಟ್ಟೆ ಮಾರುಕಟ್ಟೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸಚಿವಾಲಯ ಹೇಳಿದೆ.
ಕೋವಿಡ್ನಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಿರುವಾಗ ಕೋಳಿ ಮತ್ತು ಕೋಳಿ ಉತ್ಪನ್ನಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಈ ವಿಚಾರವನ್ನು ಮರುಪರಿಶೀಲಿಸುವಂತೆ ರಾಜ್ಯಗಳಿಗೆ ಕೋರಲಾಗಿದೆ. ಚೆನ್ನಾಗಿ ಬೇಯಿಸಿದ ಕೋಳಿ ಮತ್ತು ಮೊಟ್ಟೆಗಳ ಸೇವನೆಯು ಮನುಷ್ಯರಿಗೆ ಸುರಕ್ಷಿತವಾಗಿದೆ ಎಂದು ಪುನರುಚ್ಚರಿಸಲಾಗಿದೆ. ಆಧಾರರಹಿತ ವದಂತಿಗಳಿಗೆ ಗ್ರಾಹಕರು ಗಮನನೀಡಬಾರದು ಎಂದು ಎಫ್‌ಹೆಚ್‌ಡಿ ಹೇಳಿದೆ.