ಕೊಟ್ಟಾಯಂ (ಕೇರಳ): ಹಕ್ಕಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ 6,000ಕ್ಕೂ ಹೆಚ್ಚು ಪಕ್ಷಿಗಳನ್ನು ಕೊಟ್ಟಾಯಂನ ವ್ಯಾಪ್ತಿಯ ವೇಚೂರು, ನೀಂದೂರ್ ಮತ್ತು ಅರ್ಪುಕರ ಪಂಚಾಯಿತಿಯಲ್ಲಿ ಕೊಲ್ಲಲಾಗಿದೆ. ವೇಚೂರು ಗ್ರಾಮ ಪಂಚಾಯಿತಿಯಲ್ಲಿ 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನೀಂದೂರು ಪಂಚಾಯಿತಿಯಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪುಕಾರದಲ್ಲಿ 2,975 ಬಾತುಕೋಳಿ ಸೇರಿ ಒಟ್ಟು 6,017 ಪಕ್ಷಿಗಳಿಗೆ ದಯಾಮರಣ ನೀಡಲಾಗಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಬಾತುಕೋಳಿಗಳು ಮತ್ತು ಕೋಳಿಗಳು ಸಾಮೂಹಿಕವಾಗಿ ಸಾವನ್ನಪ್ಪಿದ ನಂತರ ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಲ್ಯಾಬ್ನಲ್ಲಿ ಪರೀಕ್ಷೆ ನಡೆಸಿ ಎಚ್5ಎನ್1 ಸೋಂಕು ಇರುವುದು ದೃಢಪಟ್ಟಿತ್ತು. ಎಚ್5ಎನ್1 ಹಕ್ಕಿ ಜ್ವರ ವೇಚೂರು, ನೀಂದೂರು ಮತ್ತು ಅರ್ಪುಕರ ಪಂಚಾಯತ್‌ಗಳಲ್ಲಿ ಕಾಣಿಸಿಕೊಂಡಿದ್ದರಿಂದ ಆ ಪ್ರದೇಶದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಪಕ್ಷಿಗಳನ್ನು ದಯಾಮರಣ ಮಾಡಿ ಹೂಳಲಾಗಿದೆ ಎಂದು ಅವರು ಹೇಳಿದರು.
ಮಾಂಸ, ಮೊಟ್ಟೆ ಮಾರಾಟ ನಿಷೇಧ: ವೈರಸ್ ಸೋಂಕು ದೃಢಪಟ್ಟಿ ಜಿಲ್ಲೆಯ 15 ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಡಿಸೆಂಬರ್ 23ರಿಂದ ಮೂರು ದಿನಗಳ ಕಾಲ ಮೊಟ್ಟೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.
ಮನುಷ್ಯರಿಗೆ ಹರಡುವುದಿಲ್ಲ: ಮೂರರಿಂದ ಐದು ದಿನಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಾಮೂಹಿಕವಾಗಿ ಪಕ್ಷಿಗಳ ಸಾವು ಸಂಭವಿಸುತ್ತದೆ. ಈ ವೈರಸ್‌ಗಳು ಸಾಮಾನ್ಯವಾಗಿ ಮನುಷ್ಯರಿಗೆ ಹರಡುವುದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮ ವಹಿಸಿ, ಪಶು ಸಂರಕ್ಷಣಾ ಇಲಾಖೆ, ಸ್ಥಳೀಯ ಸಂಸ್ಥೆಗಳು, ಕಂದಾಯ, ಪೊಲೀಸ್, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಹಾಗು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗಳ ಸಮನ್ವಯ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚಿಸಿದರು.
ಕೋಳಿ ಆಮದು ನಿಲ್ಲಿಸಿದ ಲಕ್ಷದ್ವೀಪ: ಲಕ್ಷದ್ವೀಪ ಆಡಳಿತವು ಕೇರಳದಲ್ಲಿ ಹಕ್ಕಿಜ್ವರದ ಹರಡುವಿಕೆ ವರದಿಯಾದ ನಂತರ ಅಲ್ಲಿಂದ ಕೋಳಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ.
ಇದನ್ನೂ ಓದಿ: ಒಮಿಕ್ರಾನ್ ಬಿಎಫ್ 7 ತಡೆಗೆ ಭಾರತ ಸಶಕ್ತ ..ವಿಮಾನಯಾನ ನಿರ್ಬಂಧ,ಲಾಕ್ಡೌನ್ ಹೇರುವ ಅಗತ್ಯವಿಲ್ಲ: ತಜ್ಞರ ಅಭಿಮತ