ಜೈಸಲ್ಮೇರ್/ಬೆಂಗಳೂರು : ಸುಮಾರು ನಾಲ್ಕು ವರ್ಷಗಳ ಹಿಂದೆ ರಾಜಸ್ಥಾನದ ಜೈಸಲ್ಮೇರ್‌ಗೆ ಭೇಟಿ ನೀಡಲು ಬಂದಿದ್ದ ಬೈಕ್ ರೇಸರ್ ಅಸ್ಬಾಕ್ ಹತ್ಯೆಯ ಮಾಸ್ಟರ್ ಮೈಂಡ್ ಆದ ಅಸ್ಬಾಕ್‌ನ ಪತ್ನಿ ಸುಮೇರಾ ಪರ್ವೇಜ್ ಅನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿದ್ದ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಎರಡು ವರ್ಷಗಳ ಹಿಂದೆಯೇ ಬಂಧಿಸಿದ್ದರು. ಕೊಲೆಯ ನಂತರ ಮಾಸ್ಟರ್ ಮೈಂಡ್ ಸುಮೇರಾಳನ್ನು ಹಿಡಿಯಲು ನಿರಂತರ ಪ್ರಯತ್ನಗಳು ನಡೆಯುತ್ತಿದ್ದರೂ ಆಕೆ ಪೊಲೀಸರ ಕೈಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದಳು. ಕೊನೆಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಬೈಕ್ ರೇಸರ್ ಅಸ್ಬಕ್ ಮೌನ್ ಧರೋತ್ ಅವರು ತಮ್ಮ ಹೆಂಡತಿ ಹಾಗೂ ಸಹಚರರಾದ ಸಂಜಯ್ ಕುಮಾರ್, ವಿಶ್ವಾಸ್ ಎಸ್‌ಡಿ ಮತ್ತು ಅಬ್ದುಲ್ ಸಾಬಿಕ್ ಅವರೊಂದಿಗೆ 11 ಆಗಸ್ಟ್ 2018 ರಂದು ಬೆಂಗಳೂರಿನಿಂದ ಜೈಸಲ್ಮೇರ್‌ಗೆ ತೆರಳಿದ್ದರು. ಆಗಸ್ಟ್ 17 ರಂದು ಶಹಗರ್ ಪ್ರದೇಶದ ಮರಳು ದಿಬ್ಬದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಅಸ್ಬಾಕ್ ಶವ ಪತ್ತೆಯಾಗಿತ್ತು. ಪತ್ನಿ ಸುಮೇರಾ ಪರ್ವೇಜ್ ತನ್ನ ತಂದೆಯೊಂದಿಗೆ ಜೈಸಲ್ಮೇರ್‌ಗೆ ಬಂದು ಘಟನೆ ಸಂಬಂಧ ದೂರು ದಾಖಲು ಮಾಡಿದ್ದಳು. ಪೊಲೀಸರು ಇದನ್ನು ಅಪಘಾತ ಅಥವಾ ನಿರ್ಜಲೀಕರವಾಗಿ ಸಾವಿಗೀಡಾಗಿದ್ದಾರೆ ಎಂದು ಪರಿಗಣಿಸಿ ಫೈಲ್ ಕ್ಲೋಸ್ ಮಾಡಲು ಮುಂದಾಗಿದ್ದರು.
ಬೈಕ್ , ನೇತಾಡುವ ಹೆಲ್ಮೆಟ್ ಕೊಟ್ಟ ಸಾಕ್ಷ್ಯ: ಇದರ ನಡುವೆ ಮೃತ ಅಸ್ಬಾಕ್ ಅವರ ತಾಯಿ ಮತ್ತು ಅವರ ಸಹೋದರ ಅಸ್ಬಾಕ್ ಮೌನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲು ಮಾಡಿದ್ದರು. ಇದರಿಂದ ಆತ ಕೊಲೆಯಾಗಿದ್ದಾನೆ ಎಂಬ ಸುಳಿವು ಸಿಕ್ಕಿತ್ತು. ಮುಂದೆ ಚಲಿಸಲು ಸಾಧ್ಯವಾಗದ ರೀತಿಯಲ್ಲಿ ಆತನ ಕತ್ತಿನ ಮೇಲೆ ಗಾಯವಾಗಿದ್ದವು. ಇದರ ನಡುವೆ ಬೈಕ್ ಮತ್ತು ನೇತಾಡುವ ಹೆಲ್ಮೆಟ್‌ನಿಂದ ಪ್ರಕರಣವು ತನ್ನ ತಿರುವನ್ನೇ ಬದಲಿಸಿದೆ.
ಎಸ್ಪಿ ಡಾ.ಅಜಯ್ ಸಿಂಗ್ ಮಾರ್ಗದರ್ಶನದಲಿ ನಡೆದ ತನಿಖೆಯ ಕಡತವನ್ನು ಇನ್ನೇನು ಮುಚ್ಚಬೇಕು ಎನ್ನುವಾಗ ಅಲ್ಲೇನೋ ಅನುಮಾನ ಬಂದು ಮತ್ತೇ ವಿಷಯದ ಬುಡಕ್ಕೆ ಹೋಗುವಂತೆ ಅಧಿಕಾರಿಗಳಿಗೆ ಸಿಂಗ್ ಮತ್ತೊಮ್ಮೆ ಸೂಚನೆ ನೀಡಿದ ಬೆನ್ನಲ್ಲೇ ಪ್ರಕರಣ ಬೆಳಕಿಗೆ ಬಂದಿದೆ. ಕುತ್ತಿಗೆಗೆ ಗಾಯವಾದ ನಂತರ ವ್ಯಕ್ತಿಯು ಚಲಿಸಲು ಸಹ ಸಾಧ್ಯವಿಲ್ಲ. ಹೀಗಿರುವಾಗ ಅಪಘಾತ ಸಂಭವಿಸಿದ್ದಲ್ಲಿ ಆ ವ್ಯಕ್ತಿ ಸ್ಟಾಂಡ್ ಹಾಕಿ ಬೈಕ್ ನಿಲ್ಲಿಸಿದ್ದು ಹೇಗೆ ಎಂದು ಎಸ್ಪಿ ಡಾ.ಅಜಯ್ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದರು.
ಇನ್ನು ಅಸ್ಬಾಕ್ ದೊಡ್ಡ ಮೊತ್ತದ ಆಸ್ತಿಯ ಮಾಲೀಕರಾಗಿದ್ದು, ಪ್ರಾಥಮಿಕ ತನಿಖೆ ಮತ್ತು ಅಸ್ಬಾಕ್ ಸುತ್ತಮುತ್ತಲಿನ ಜನರ ವಿಚಾರಣೆಯಲ್ಲಿ, ಕೊಲೆಗೆ ಪ್ರಮುಖ ಕಾರಣ ಗಂಡ ಹೆಂಡಿರ ನಡುವೆ ಇದ್ದ ಗಲಾಟೆ ಎಂದು ತಿಳಿದು ಬಂದಿದೆ.
ನಾಪತ್ತೆಯಾಗಿದ್ದ ಕೊಲೆಪಾತಕಿ: ಹತ್ಯೆ ಮಾಡಿದ ಇಬ್ಬರು ಸ್ನೇಹಿತರು ಈಗಾಗಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಅಸ್ಬಾಕ್ ಹತ್ಯೆಯಲ್ಲಿ ಆತನ ಪತ್ನಿ ಸುಮೇರಾ ಪರ್ವೇಜ್ ಕೂಡ ಭಾಗಿಯಾಗಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದ ನಂತರ ಆಕೆ ಬಹಳ ದಿನಗಳಿಂದ ನಾಪತ್ತೆಯಾಗಿದ್ದಳು.
3 ತಿಂಗಳಿಗೊಮ್ಮೆ ಸಿಮ್ ಬದಲಾವಣೆ: ಈಕೆ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಮೊಬೈಲ್ಗೆ ಕೇವಲ ಎಸ್ಎಂಎಸ್ ಬರುವಂತೆ ಸಿಮ್ ರೆಡಿ ಮಾಡಿಕೊಂಡಿದ್ದಳು. ಅದರಲ್ಲೂ ಮೂರು ತಿಂಗಳಿಗೆ ಸಿಮ್ ಬದಲಾವಣೆ ಮಾಡಿಕೊಳ್ಳುತ್ತಿದ್ದಳಂತೆ. ಸುಮೇರಾಳನ್ನು ಹಿಡಿಯಲು ಪೊಲೀಸರು ಹಲವು ಬಾರಿ ಬಲೆ ಬೀಸಿದರೂ ಸಫಲವಾಗಿರಲಿಲ್ಲ.
ಸುಮೇರಾ ಮನೆಯಲ್ಲಿ ಸಿಸಿಟಿವಿ: ಸುಮೇರಾ ತನ್ನ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಕೊಂಡಿದ್ದು, ಪೊಲೀಸರು ಸುಮೇರಳನ್ನು ಬಂಧಿಸಲು ಬೆಂಗಳೂರಿನ ಆರ್‌ಟಿ ನಗರಕ್ಕೆ ಆಗಮಿಸಿದಾಗ ಇವೆಲ್ಲಾ ಕಂಡು ಬಂದಿವೆ. ಸುಮೇರಾ ಡಿವಿಆರ್ ನಿಂದ ಹೊರಗಿನ ಚಲನವಲನದ ಮೇಲೆ ಸದಾ ಕಣ್ಣಿಟ್ಟಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: ಕಮಲ್ ಪಂತ್ ವರ್ಗಾವಣೆ.. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ನೇಮಕ