ಪುಣೆ (ಮಹಾರಾಷ್ಟ್ರ): ಗೂಗಲ್ ಮ್ಯಾಪ್ನಲ್ಲಿ ಹುಡುಕುತ್ತ ಸಂಚರಿಸುತ್ತಿದ್ದ ವೇಳೆ ಬೈಕ್ ಅಪಘಾತಕ್ಕೀಡಾದ ಘಟನೆ ಪುಣೆ ಸಮೀಪದ ಬೆಂಗಳೂರು-ಮುಂಬೈ ಹೆದ್ದಾರಿಯ ಬೈಪಾಸ್ನಲ್ಲಿ ನಡೆದಿದೆ. ಬೈಕ್ ಹಿಂಬದಿ ಕುಳಿತಿದ್ದ 23 ವರ್ಷದ ಯುವತಿ ಮೃತಪಟ್ಟಿದ್ದಾರೆ. ಬೈಕ್ ಸವಾರ ನಟರಾಜ್ ಅನಿಲಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಲ್ಲಿನ ವನವಾಡಿ ನಿವಾಸಿಯಾದ ನಟರಾಜ್ ಮತ್ತು ಮೃತ ಯುವತಿ ಐಟಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಎಂಜಿನಿಯರ್ಗಳಾಗಿ ಕೆಲಸ ಮಾಡುತ್ತಿದ್ದರು. ಜನವರಿ 28ರಂದು ಇಬ್ಬರೂ ಕೂಡ ಸಿಂಹಗಢಕ್ಕೆ ಬೈಕ್ನಲ್ಲಿ ತೆರಳಿದ್ದರು. ನಂತರ ರಾತ್ರಿ 8 ಗಂಟೆಯ ಸುಮಾರಿಗೆ ವನವಾಡಿ ಎಂಬಲ್ಲಿಗೆ ಮರಳಲು ಗೂಗಲ್ ಮ್ಯಾಪ್ ಬಳಸಿದ್ದಾರೆ. ಆಗ ಮುಂಬೈ ಮತ್ತು ಬೆಂಗಳೂರು ಹೆದ್ದಾರಿಯ ಬೈಪಾಸ್ ತೋರಿಸಿದ್ದು, ಇದೇ ದಾರಿಗೆ ಬಂದಿದ್ದಾರೆ.
ಆದರೆ, ಮುಖ್ಯರಸ್ತೆಗೆ ಬಂದ ಬಳಿಕ ವನವಾಡಿಗೆ ತೆರಳುವ ರಸ್ತೆ ಇದಲ್ಲ, ದಾರಿ ತಪ್ಪಿರುವುದು ಅವರ ಗಮನಕ್ಕೆ ಬಂದಿದೆ. ಅಂತೆಯೇ, ಸಮೀಪದ ಸುರಂಗದ ಬಳಿ ಸಂಚರಿಸುತ್ತಿದ್ದಾಗ ವೇಗವಾಗಿ ಬಂದ ಲಾರಿ ಗುದ್ದಿದೆ. ಹಿಂಬದಿ ಕುಳಿತಿದ್ದ ಯುವತಿಯ ತಲೆಗೆ ತೀವ್ರವಾದ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಲ್ಲಿ ನಟರಾಜ್ ಸಹ ಗಾಯಗೊಂಡಿದ್ದು, ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಭಾರತಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆ್ಯಸಿಡ್ ದಾಳಿ, ಮಹಿಳೆ ಸಾವು: ಮತ್ತೊಂದೆಡೆ, 25 ವರ್ಷಗಳಿಂದ ಲಿವ್-ಇನ್ ರಿಲೇಶನ್ಶಿಪ್ನಲ್ಲಿದ್ದ ಮಹಿಳೆಯ ಮೇಲೆ ಪ್ರಿಯಕರ ಆ್ಯಸಿಡ್ ಎರಚಿದ ಪರಿಣಾಮ ಆಕೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಘಟನೆ ಮುಂಬೈಯಲ್ಲಿ ವರದಿಯಾಗಿದೆ. 54 ವರ್ಷದ ಗೀತಾ ಗಿರಿಕರ್ ಎಂಬುವರು ಮೃತರು. 63 ವರ್ಷದ ವೃದ್ಧ ಮಹೇಶ್ ಪೂಜಾರಿ ದುಷ್ಕೃತ್ಯ ಎಸಗಿದ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿ ಮಹೇಶ್ ಈ ಹಿಂದೆ ಮದುವೆಯಾಗಿದ್ದರೂ ಗೀತಾ ಜೊತೆ ಸುದೀರ್ಘ ಕಾಲದಿಂದ ಸಂಬಂಧ ಹೊಂದಿದ್ದನು. ಗೀತಾಗೂ ಇಬ್ಬರು ಮಕ್ಕಳಿದ್ದು, ಅವರು ದೊಡ್ಡವರಾಗುತ್ತಿರುವ ಕಾರಣ ಮಹೇಶ್ ಜೊತೆ ಸಂಬಂಧ ಮುಂದುವರೆಸಲು ಗೀತಾ ನಿರಾಕರಿಸಿದ್ದರು. ಇದೇ ಕಾರಣದಿಂದ ಇಬ್ಬರ ನಡುವೆ ಗಲಾಟೆ ನಡೆದಿದೆ. ಜನವರಿ 13ರಂದು ಬೆಳಗ್ಗೆ ಗೀತಾ ಮನೆಯಿಂದ ಹೊರಬರುತ್ತಿದ್ದಾಗ ಮಹೇಶ್ ಆ್ಯಸಿಡ್ ದಾಳಿ ಮಾಡಿದ್ದಾರೆ.
ಗೀತಾ ಕಣ್ಣು ಮತ್ತು ಮುಖದ ಭಾಗಕ್ಕೆ ಗಂಭೀರವಾದ ಸುಟ್ಟು ಗಾಯಗಳಾಗಿದ್ದವು. ಅಂದಿನಿಂದ 18 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಲೋಕಮಾನ್ಯ ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರೀತ್ಸೆ ಪ್ರೀತ್ಸೆ ಅಂತಾ ಹಿಂದೆ ಬಿದ್ದ ಪಾಗಲ್ ಪ್ರೇಮಿ.. ಕಿರುಕುಳ ತಾಳಲಾರದೆ ದಂತ ವೈದ್ಯೆ ಆತ್ಮಹತ್ಯೆ