ಪಾಟ್ನಾ(ಬಿಹಾರ): ಬಿಹಾರದ ಸೀತಾಮರ್ಹಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರ ಮೇಲೆ ದುರುಳರು ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಇದಕ್ಕೆ ಭಾರಿ ಪ್ರತಿರೋಧ ತೋರಿಸಿದ್ದಾರೆ, ಈ ಹಿನ್ನೆಲೆಯಲ್ಲಿ ಆ ಇಬ್ಬರು ದುರುಳರು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ದುಷ್ಕರ್ಮಿಗಳ ಈ ಕೃತ್ಯದಿಂದಾಗಿ ಆ ಮಹಿಳೆಯ ಶೇ 60 ರಷ್ಟು ದೇಹ ಸುಟ್ಟು ಹೋಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿರುವ ಅವರನ್ನು ಮುಜಾಫರ್‌ಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಲ್ಲಿ ನಡೆದಿದ್ದೇನು?: ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಗೆ ಕಾರಣರಾದ ಪ್ರಮುಖ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣಗೆ ಒಳಪಡಿಸಿದ್ದಾರೆ. ಮಂಗಳವಾರ ಈ ಘಟನೆ ನಡೆದಿದ್ದು, ಸುಮಾರು 21 ವರ್ಷ ವಯಸ್ಸಿನ ಮಹಿಳೆ ತನ್ನ ತಂದೆಯ ಅನುಪಸ್ಥಿತಿಯಲ್ಲಿ ತಮ್ಮ ಹಳ್ಳಿಯಲ್ಲಿರುವ ಜಮೀನಿನಲ್ಲಿ ಕಾವಲು ಕಾಯುತ್ತಿದ್ದರು ಎನ್ನಲಾಗಿದೆ. ಅತ್ತ ಅವರ ತಂದೆ ಔಷಧ ಖರೀದಿಸಲು ಸೀತಾಮರ್ಹಿ ಪಟ್ಟಣಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಆರೋಪಿಗಳಲ್ಲಿ ಒಬ್ಬನಾದ ಅಮರ್ ಯಾದವ್, ತನ್ನ ಸ್ನೇಹಿತನೊಂದಿಗೆ ಮಹಿಳೆ ಮೇಲೆ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದ. ಆದರೆ ಸಂತ್ರಸ್ತೆ ಅದನ್ನು ವಿರೋಧಿಸಿ, ಆ ಯತ್ನವನ್ನು ವಿಫಲಗೊಳಿಸಿದ್ದರು. ಇದರಿಂದ ರೊಚ್ಚಿಗೆದ್ದ ಆರೋಪಿಗಳು ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸಂತ್ರಸ್ತೆ ತನ್ನ ಪ್ರಾಣ ಉಳಿಸಿಕೊಳ್ಳುವ ಉದ್ದೇಶದಿಂದ ಸಮೀಪದ ಕೊಳಕ್ಕೆ ಹಾರಿದ್ದಾಳೆ ಎಂದು ಪುಪ್ರಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ವಿಜಯ್ ಕುಮಾರ್ ತಿಳಿಸಿದ್ದಾರೆ.
ಇದನ್ನು ಓದಿ: ಬ್ಯಾಡ್ಮಿಂಟನ್ ಆಡುತ್ತಿದ್ದ ಯುವಕ ನೋಡನೋಡುತ್ತಿದ್ದಂತೆ ಕುಸಿದು ಬಿದ್ದು ಸಾವು: ವಿಡಿಯೋ