ಪಾಟ್ನಾ(ಬಿಹಾರ): ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಹಾರದಲ್ಲಿ ಜೆಡಿಯು-ಬಿಜೆಪಿ ನಡುವಿನ ಸ್ನೇಹ ಮುರಿದು ಬಿದ್ದಿದೆ. ಇಂದು ಸಂಜೆ 4 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲಿರುವ ನಿತೀಶ್ ಕುಮಾರ್ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಮಾತ್ರ ಹೊರಬಿದ್ದಿಲ್ಲ.
ಮಹತ್ವದ ಸಭೆ ನಡೆಸಿದ ನಿತೀಶ್ ಕುಮಾರ್: ಬಿಜೆಪಿ ಜೊತೆಗಿನ ಮೈತ್ರಿ ವಿಚಾರವಾಗಿ ಸಿಎಂ ನಿತೀಶ್ ಕುಮಾರ್ ಇಂದು ಶಾಸಕರು, ಸಂಸದರೊಂದಿಗೆ ಮಹತ್ವದ ಸಭೆ ನಡೆಸಿದರು. ಬಹುತೇಕ ಸದಸ್ಯರು ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ. ಇದರ ಜೊತೆಗೆ ನಿತೀಶ್ ಕುಮಾರ್ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿಯೂ ತಿಳಿಸಿದ್ದಾರೆಂದು ಹೇಳಲಾಗ್ತಿದೆ.
2020ರ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ+ಜೆಡಿಯು ಸೇರಿ ಸರ್ಕಾರ ರಚನೆ ಮಾಡಿದ್ದವು. ಕೇವಲ 43 ಸ್ಥಾನಗಳಲ್ಲಿ ಗೆದಿದ್ದು ಜೆಡಿಯು ಪಕ್ಷಕ್ಕೆ ಬಿಜೆಪಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿತ್ತು. ನಂತರ ಉಭಯ ಪಕ್ಷಗಳ ನಡುವೆ ಶೀತಲ ಸಮರ ನಡೆಯುತ್ತಿತ್ತು. ಕಳೆದ ಕೆಲ ದಿನಗಳ ಹಿಂದೆ ಜೆಡಿಯುನ ಆರ್ಸಿಪಿ ಸಿಂಗ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಈ ಸಮರ ಮತ್ತಷ್ಟು ಉಲ್ಭಣಗೊಂಡಿತ್ತು.
ರಾಜ್ಯಪಾಲರ ಭೇಟಿಗೆ ಅವಕಾಶ ಕೋರಿದ ನಿತೀಶ್ ಕುಮಾರ್: ಸಿಎಂ ನಿತೀಶ್ ಕುಮಾರ್, ರಾಜ್ಯಪಾಲ ಫಾಗು ಚೌಹಾಣ್ ಅವರ ಭೇಟಿಗೆ ಇಂದು ಸಂಜೆಯೇ ಕಾಲಾವಕಾಶ ಕೋರಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯೂ ದಟ್ಟವಾಗಿದೆ. ಇದರ ನಡುವೆ ಬಿಜೆಪಿ ಸಚಿವರು ಕೂಡಾ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದಾರೆ.
ಜೆಡಿಯುಗೆ ಆರ್‌ಜೆಡಿ ಬೆಂಬಲ: ಇಂದು ನಡೆದ ಮಹಾಮೈತ್ರಿಕೂಟದ ಸಭೆಯಲ್ಲಿ ಆರ್‌ಜೆಡಿ ಶಾಸಕರು, ಎಂಎಲ್‌ಸಿಗಳು ಮತ್ತು ರಾಜ್ಯಸಭಾ ಸಂಸದರು ತೇಜಸ್ವಿ ಯಾದವ್‌ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಿದ್ದು, ನಾವು ನಿಮ್ಮೊಂದಿಗಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ಜೆಡಿಯುಗೆ ಬೆಂಬಲ ಸೂಚಿಸುವ ಹೇಳಿಕೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಯಲ್ಲಿ ಬಿರುಕು: ಮಹತ್ವದ ಸಭೆ ಕರೆದ ಸಿಎಂ ನಿತೀಶ್ ಕುಮಾರ್