ಕೊಯಮತ್ತೂರು (ತಮಿಳುನಾಡು): ತಮಿಳುನಾಡಿನಲ್ಲಿ ಉತ್ತರ ಭಾರತದ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಸುಳ್ಳು ಮಾಹಿತಿ ಹರಡಿದ ಬಿಹಾರದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ಕುಮಾರ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ಸುಳ್ಳು ಮಾಹಿತಿಯನ್ನು ಪೋಸ್ಟ್ ಮಾಡಿದ್ದರು ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಭಾರತೀಯ ವಲಸೆ ಕಾರ್ಮಿಕರು ಭಯಪಡಬೇಕಿಲ್ಲ: ತಮಿಳುನಾಡು ರಾಜ್ಯಪಾಲರ ಭರವಸೆ
ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ತಿರುಪುರದಲ್ಲಿ ನೆಲೆಸಿರುವ ವಲಸೆ ಕಾರ್ಮಿಕರ ಬಗ್ಗೆ ಫೇಸ್‌ಬುಕ್‌ನಲ್ಲಿ ಸುಳ್ಳು ಮಾಹಿತಿಯನ್ನು ಹರಡಿದ್ದಕ್ಕಾಗಿ ಪ್ರಶಾಂತ್ಕುಮಾರ್ನನ್ನು ತಮಿಳುನಾಡಿನ ಪೊಲೀಸರ ತಂಡ ಬಂಧಿಸಿದೆ. ಆರೋಪಿ ಮೂಲತಃ ಬಿಹಾರದ ಮೂಲದವನಾಗಿದ್ದು, ಜಾರ್ಖಂಡ್‌ನ ಲತೇಹರ್ ಜಿಲ್ಲೆಯ ಹೆನೆಗರೆ ಗ್ರಾಮದಲ್ಲಿ ನೆಲೆಸಿದ್ದ. ಇದರ ಮಾಹಿತಿ ಅರಿತ ಪೊಲೀಸ ತಂಡವು ಅಲ್ಲಿಯೇ ಮೊಕ್ಕಾಂ ಹೂಡಿ ಮಾರ್ಚ್ 11ರಂದು ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದೆ.
ಜಾರ್ಖಂಡ್‌ನಲ್ಲಿ ಆರೋಪಿ ಪ್ರಶಾಂತ್ಕುಮಾರ್ನನ್ನು ಬಂಧಿಸಿದ ಬಳಿಕ ಲತೇಹಾರ್‌ನಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಲಾಗಿತ್ತು. ನಂತರ ಟ್ರಾನ್ಸಿಟ್ ವಾರಂಟ್ ಮೇಲೆ ಆರೋಪಿಯನ್ನು ತಿರುಪುರಕ್ಕೆ ಕರೆತರಲಾಗಿದೆ. ಇದೀಗ ಇಲ್ಲಿನ 3ನೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪ್ರಶಾಂತ್ಕುಮಾರ್ನನ್ನು ಹಾಜರುಪಡಿಸಲಾಗಿದೆ. ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರ ತಂಡ ಮಾಹಿತಿ ನೀಡಿದೆ.
11 ಎಫ್ಐಆರ್ಗಳು ದಾಖಲು: ವಲಸೆ ಕಾರ್ಮಿಕರ ಮೇಲೆ ಹಲ್ಲೆ ಬಗ್ಗೆ ವದಂತಿ ಹಬ್ಬಿಸಿದ ಸಂಬಂಧ ಇದುವರೆಗೆ ಎಫ್ಐಆರ್ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಪಾಟ್ನಾ ಮೂಲದ ಪತ್ರಕರ್ತ ದೈನಿಕ್ ಭಾಸ್ಕರ್ ಪತ್ರಿಕೆ ಸಂಪಾದಕ, 'ತನ್ವೀರ್ ಪೋಸ್ಟ್' ಟ್ವಿಟರ್ ಖಾತೆ ಬಳಕೆದಾರ ಮೊಹಮ್ಮದ್ ತನ್ವೀರ್, ಬಿಜೆಪಿ ವಕ್ತಾರ ಪ್ರಶಾಂತ್ ಉಮ್ರಾವ್, ಶುಭಂ ಶುಕ್ಲಾ ಎಂಬುವವರ ತಮಿಳುನಾಡು ಪೊಲೀಸರು ಕೇಸ್ಗಳನ್ನು ದಾಖಲಿಕೊಂಡಿದ್ದಾರೆ. ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಿಕ್ಕಟ್ಟು ಸೃಷ್ಟಿಸಿದ್ದ ಸುಳ್ಳು ಸುದ್ದಿ: ಬಿಹಾರ ಮತ್ತು ತಮಿಳುನಾಡು ಸರ್ಕಾರಗಳಿಗೆ ಬಿಕ್ಕಟ್ಟು ಉಂಟು ಮಾಡುವಂತೆಯೂ ಆಗಿತ್ತು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಬಿಹಾರದ ವಿಧಾನಸಭೆಯಲ್ಲಿ ಬಿಜೆಪಿ ಗಲಾಟೆ ಮಾಡಿತ್ತು. ಅಲ್ಲದೇ, ತಮಿಳುನಾಡಿಗೆ ಬಿಹಾರದಿಂದ ಉನ್ನತ ಅಧಿಕಾರಿಗಳ ತಂಡವನ್ನು ಕಳುಹಿಸಿ ವಸ್ತುಸ್ಥಿತಿಯ ಮಾಹಿತಿ ಕಲೆ ಹಾಕಿತ್ತು. ಮತ್ತೊಂದೆಡೆ, ತಮಿಳುನಾಡು ಮತ್ತು ಪೊಲೀಸರು ಕಾರ್ಮಿಕರ ಮೇಲೆ ದುರುದ್ದೇಶಪೂರಿತವಾಗಿ ಯಾವುದೇ ಹಲ್ಲೆ ಘಟನೆಗಳು ನಡೆದಿಲ್ಲ. ಸುಳ್ಳು ಸುದ್ದಿಗಳನ್ನು ಹರಡಲಾಗಿದೆ ಎಂದು ಆರಂಭದಿಂದಲೂ ಹೇಳಿದ್ದರು.
ಇದನ್ನೂ ಓದಿ: ವಲಸೆ ಕಾರ್ಮಿಕರ ಸಮೀಕ್ಷೆಗೆ ಮುಂದಾದ ತಮಿಳುನಾಡು: ಸಿಎಂ ನಿತೀಶ್ ಭೇಟಿಯಾದ ಡಿಎಂಕೆ ಸಂಸದ
ಇಷ್ಟೆ ಅಲ್ಲ, ಖುದ್ದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ರಾಜ್ಯದಲ್ಲಿ ವಲಸೆ ಕಾರ್ಮಿಕರ ಸುರಕ್ಷತೆ ಬಗ್ಗೆ ಖಾತರಿಪಡಿಸಿದ್ದರು. ಇದೇ ವೇಳೆ ಕೆಲ ಮಾಧ್ಯಮದವರು ಬೇರೆ ರಾಜ್ಯದಲ್ಲಿ ನಡೆದ ಘರ್ಷಣೆಯನ್ನು ತಮಿಳುನಾಡಿನಲ್ಲಿ ನಡೆದಿರುವಂತೆ ಬಿಂಬಿಸಿ ಪೋಸ್ಟ್ ಮಾಡಿದ್ದಾರೆ. ಜನರಲ್ಲಿ ಭಯ ಮತ್ತು ಗಾಬರಿ ಮೂಡಿಸಲು ತಪ್ಪು ಮತ್ತು ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಇಂತಹ ಕೆಲಸ ಮಾಡುತ್ತಿರುವವರು ಭಾರತದ ವಿರೋಧಿಗಳು ಎಂದು ಸಿಎಂ ಸ್ಟಾಲಿನ್ ವಾಗ್ದಾಳಿ ನಡೆಸಿದ್ದರು.
ಮತ್ತೊಂದೆದೆ, ತಮಿಳುನಾಡಿನಿಂದ ಕೇಂದ್ರದ ಮಾಜಿ ಸಚಿವರಾದ ಟಿಆರ್ ಬಾಲು ಬಿಹಾರಕ್ಕೆ ತೆರಳಿ, ಸಿಎಂ ನಿತೀಶ್ ಕುಮಾರ್ನನ್ನು ಭೇಟಿ ಮಾಡಿದ್ದರು. ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಸುರಕ್ಷತೆಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆಯೂ ಸಿಎಂ ನಿತೀಶ್ಗೆ ಬಾಲು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಸುಳ್ಳು ಸುದ್ದಿ ಹಬ್ಬಿಸಿದವರು ದೇಶ ವಿರೋಧಿಗಳು ಎಂದ ಸ್ಟಾಲಿನ್: ಪತ್ರಿಕೆ ಸಂಪಾದಕ ಸೇರಿ ಮೂವರ ವಿರುದ್ಧ ಕೇಸ್