ಪಾಟ್ನಾ: ಸುಮಾರು 60 ವರ್ಷಗಳ ಹಿಂದೆ ಗಾಂಧಿವಾದಿ ವಿನೋಬಾ ಭಾವೆಯವರು ಆರಂಭಿಸಿದ್ದ ಭೂದಾನ ಚಳವಳಿಯ ಕಾಲದಲ್ಲಿ ದಾನ ಮಾಡಲಾದ ಭೂಮಿಯ ಪೈಕಿ 1.60 ಲಕ್ಷ ಎಕರೆ ಭೂಮಿಯು ಭೂರಹಿತರಿಗೆ ವಿತರಣೆ ಮಾಡಲು ಎಲ್ಲ ರೀತಿಯಿಂದ ಯೋಗ್ಯವಾಗಿದೆ ಎಂದು ಬಿಹಾರ ಸರ್ಕಾರ ಈಗ ಕಂಡುಕೊಂಡಿದೆ. 1.60 ಲಕ್ಷ ಎಕರೆಗಳ ವಿತರಣೆಯ ಪ್ರಕ್ರಿಯೆಯು ದೃಢೀಕರಿಸಲ್ಪಟ್ಟಿದೆ ಎಂದು ಬಿಹಾರ ಸರ್ಕಾರದ ಕಂದಾಯ ಮತ್ತು ಭೂಸುಧಾರಣಾ ಇಲಾಖೆಯ ಮೂಲಗಳು ಖಚಿತಪಡಿಸಿವೆ. ಈ ವರ್ಷ ಡಿಸೆಂಬರ್ ನಂತರ ಯಾವುದೇ ಸಮಯದಲ್ಲಿ ಭೂಮಿಯ ವಿತರಣೆ ಪ್ರಾರಂಭವಾಗಲಿದೆ.
1950 ರ ದಶಕ ಮತ್ತು 60 ರ ದಶಕದ ಆರಂಭದಲ್ಲಿ ಜನರು ಸಾಕಷ್ಟು ಪ್ರಮಾಣದ ಭೂಮಿಯನ್ನು ದಾನ ಮಾಡಿದ್ದರು. ಆದರೆ ದೃಢೀಕರಣಕ್ಕಾಗಿ ರಾಜ್ಯ ಭೂದಾನ ಸಮಿತಿಯು ಅವುಗಳನ್ನು ಪರಿಶೀಲಿಸಿದಾಗ, ಅವುಗಳಲ್ಲಿ ಹಲವಾರು ಭೂಮಿಗಳ ದಾಖಲೆಗಳ ವಿವರಗಳ ಇಲ್ಲದಿರುವುದು ಕಂಡುಬಂದಿತ್ತು. ಆದ್ದರಿಂದ, ದಾನ ಮಾಡಿದರೂ ಕಾನೂನುಬದ್ಧವಾಗಿ ಅವು ಇನ್ನೂ ದಾನಿಗಳ ಒಡೆತನದಲ್ಲಿವೆ.
ಇದಲ್ಲದೆ, ಕೆಲ ಪ್ಲಾಟ್‌ಗಳು ವಾಸ್ತವವಾಗಿ ನದಿ ನಂಡೆ, ಬೆಟ್ಟ ಮತ್ತು ಕಾಡುಗಳಲ್ಲಿವೆ ಎಂದು ಭೂದಾನ ಸಮಿತಿಯು ಕಂಡುಹಿಡಿದಿದೆ. ಈ ಸಮಸ್ಯೆಗಳಿಂದಾಗಿ ಇಡೀ ಪ್ರಕ್ರಿಯೆ ವಿಳಂಬವಾಗಿದೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕ್ರಿಯೆ ಪ್ರಾರಂಭವಾದ ನಂತರ ಸೂಕ್ತವೆಂದು ಕಂಡುಬಂದ ಈ ನಿವೇಶನಗಳನ್ನು ಭೂರಹಿತರಿಗೆ ಸಮಾನವಾಗಿ ವಿತರಿಸಲಾಗುವುದು. ರಾಜ್ಯದಲ್ಲಿ ಭೂದಾನ ಆಂದೋಲನದಡಿ ಪಡೆದ ಸುಮಾರು 6.48 ಲಕ್ಷ ಎಕರೆ ಭೂಮಿ ನಿರ್ವಹಣೆ ಮತ್ತು ಹಂಚಿಕೆಯಲ್ಲಿನ ಅಕ್ರಮಗಳ ತನಿಖೆಗಾಗಿ ರಚಿಸಲಾದ ಆಯೋಗದ ಅಂತಿಮ ವರದಿಗಾಗಿ ಇಲಾಖೆ ಕಾಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭೂದಾನ ಪರಿಶೀಲನೆಗಾಗಿ ಮೂರು ಸದಸ್ಯರ ಆಯೋಗವನ್ನು ಬಿಹಾರ ಸರ್ಕಾರ 2017 ರಲ್ಲಿ ಸ್ಥಾಪಿಸಿತ್ತು. ಮಾಜಿ ರಾಜ್ಯ ಮುಖ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಚೌಧರಿ ನೇತೃತ್ವದ ಸಮಿತಿಯು ನವೆಂಬರ್‌ನಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.