ಪಾಟ್ನಾ(ಬಿಹಾರ): ಪಾಟ್ನಾದ ನಿವಾಸಿ ರಿಚಾ ವತ್ಸಯನ್ ಅವರು ಕೃಷಿ ತ್ಯಾಜ್ಯದಿಂದ ಜೈವಿಕ ವಿಘಟನೀಯ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಿದ್ದಾರೆ. ಇದು ಮಹಿಳೆಯರಿಗೆ ಸುರಕ್ಷಿತ ಮತ್ತು ಆರೋಗ್ಯಕರ ಎಂದು ಅವರು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಆಯೋಜಿಸಿರುವ ಕೃಷಿ ಮಹೋತ್ಸವದಲ್ಲಿ ಈ ಉತ್ಪನ್ನಗಳನ್ನು ಅವರು ಪ್ರದರ್ಶಿಸಿದ್ದಾರೆ.
ಮಾಲಿನ್ಯ ತಡೆಯಲು ಸಹಕಾರಿ: ಈ ಸ್ಯಾನಿಟರಿ ಪ್ಯಾಡ್ಗಳಿಂದ ಚರ್ಮಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ. ಜತೆಗೆ ಮಾಲಿನ್ಯ ಉಂಟಾಗುವುದಿಲ್ಲ. ಮುಟ್ಟಿನ ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯವನ್ನು ತಡೆಯಲು ಇದು ಸಹಕಾರಿಯಾಗಲಿದೆ. ಸಾಮಾನ್ಯ ಸ್ಯಾನಿಟರಿ ಪ್ಯಾಡ್‌ಗಳನ್ನು ಶೇ.95 ರಷ್ಟು ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಈ ಜೈವಿಕ ವಿಘಟನೀಯ ಪ್ಯಾಡ್ ಕೊಳೆಯಲು ಸುಮಾರು 6 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಇದನ್ನು ಸಾವಯವ ಗೊಬ್ಬರವಾಗಿಯೂ ಬಳಸಬಹುದು ಎಂದು ರಿಚಾ ತಿಳಿಸಿದ್ದಾರೆ.
ಮುಟ್ಟಿನ ತ್ಯಾಜ್ಯ ದೊಡ್ಡ ಸಮಸ್ಯೆ: ರಿಚಾ ಕಲಾ ಕ್ಷೇತ್ರದಲ್ಲಿ ಅಧ್ಯಯನವನ್ನು ಮಾಡಿದ್ದಾರೆ. ಕೃಷಿ ತ್ಯಾಜ್ಯದಿಂದ ಸ್ಯಾನಿಟ್ರಸ್ಟ್ ಬಯೋಡಿಗ್ರೇಡಬಲ್ ಪ್ಯಾಡ್‌ಗಳನ್ನು ತಯಾರಿಸುತ್ತಿದ್ದಾರೆ. 2019ರಲ್ಲಿ UNICEF ನ ಲೇಖನವನ್ನು ಓದಿದ್ದೇನೆ. ಇದರಲ್ಲಿ ಮುಟ್ಟಿನ ತ್ಯಾಜ್ಯದ ಬಗ್ಗೆ ಹೇಳಲಾಯಿತು. ಇದರ ಪ್ರಕಾರ, ಈ ತ್ಯಾಜ್ಯವು ಭಾರತದಲ್ಲಿ ದೊಡ್ಡ ಸಮಸ್ಯೆಯಾಗಿದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು 130 ಸಾವಿರ ಟನ್ ಮುಟ್ಟಿನ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಈ ವಿಚಾರ ನನಗೆ ಉತ್ಪನ್ನ ತಯಾರಿಸಲು ಪ್ರೇರಣೆಯಾಯಿತು ಎಂದು ರಿಚಾ ಹೇಳಿದರು.
ರೈತರಿಗೂ ಲಾಭ: ಈ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಾಳೆ ಗಿಡದಿಂದ ತಯಾರಿಸಲಾಗುತ್ತಿದೆ. ಬಾಳೆ ಕೊನೆ ಬಿಟ್ಟ ನಂತರ ಗಿಡದ ಕಾಂಡ ರೈತರಿಗೆ ಉಪಯೋಗಕ್ಕೆ ಬರುವುದಿಲ್ಲ. ಕಟಾವಿನ ನಂತರ ರೈತರು ಅದನ್ನು ಬಿಸಾಡುತ್ತಾರೆ ಅಥವಾ ಹೊಲದಲ್ಲಿಯೇ ಸುಟ್ಟು ಹಾಕುತ್ತಾರೆ. ಇದರಿಂದ ವಾಯುಮಾಲಿನ್ಯ ಉಂಟಾಗಿ ಜಮೀನಿಗೆ ಹಾನಿಯಾಗುತ್ತದೆ. ಈಗ ಗಿಡದ ನಾರನ್ನು ಹೊರತೆಗೆದು ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಲಾಗುತ್ತಿದೆ. ಇದರಿಂದ ರೈತರಿಗೂ ಆದಾಯ ಬರುತ್ತಿದ್ದು, ಇಂಗಾಲದ ಪ್ರಮಾಣ ಕಡಿಮೆಯಾಗಿದೆ ಎಂದರು.
ಮಹಿಳೆಯರಿಗೂ ಉದ್ಯೋಗ: ಈ ಜೈವಿಕ ವಿಘಟನೀಯ ಸ್ಯಾನಿಟರಿ ಪ್ಯಾಡ್ ಮೂಲಕ ಮಹಿಳೆಯರಿಗೂ ಉತ್ತಮ ಜೀವನೋಪಾಯಕ್ಕೆ ಉದ್ಯೋಗ ಸಿಗುತ್ತಿದೆ ಎಂದು ರಿಚಾ ಹೇಳಿದ್ದಾರೆ. ಸಾಮಾನ್ಯ ಸ್ಯಾನಿಟರಿ ಪ್ಯಾಡ್‌ಗಳು ಬಿಳಿ ಬಣ್ಣದ್ದಾಗಿರುತ್ತವೆ. ಅವುಗಳನ್ನು ಬಿಳಿಯಾಗಿಸಲು ಕ್ಲೋರಿನ್‌ನಿಂದ ಬ್ಲೀಚ್ ಮಾಡಲಾಗುತ್ತದೆ. ಇದರಿಂದ ಚರ್ಮಕ್ಕೂ ಹಾನಿಯಾಗುತ್ತದೆ. ನಮ್ಮ ಸ್ಯಾನಿಟರಿ ಪ್ಯಾಡ್‌ಗಳು ನೈಸರ್ಗಿಕ ಫೈಬರ್ ಬಣ್ಣವನ್ನು ಹೊಂದಿರುತ್ತವೆ. ಹಾಗಾಗಿ ಇದು ತ್ವಚೆಗೆ ಹಾನಿಯುಂಟು ಮಾಡುವುದಿಲ್ಲ ಎಂದಿದ್ದಾರೆ.
ಸ್ಯಾನಿಟರಿ ಪ್ಯಾಡ್‌ಗಳು ಮಣ್ಣಿಗೆ ಹಾನಿಕಾರಕ: ಸಾಮಾನ್ಯ ಸ್ಯಾನಿಟರಿ ಪ್ಯಾಡ್‌ಗಳು 300 ರಿಂದ 400 ವರ್ಷಗಳವರೆಗೆ ನಾಶವಾಗುವುದಿಲ್ಲ. ಅವುಗಳಲ್ಲಿ ಪ್ಲಾಸ್ಟಿಕ್ ಅಂಶ ಇರುವುದರಿಂದ ಅವು ಮಣ್ಣಿಗೆ ಹಾನಿಕಾರಕ. ಅಂತಹ ಪರಿಸ್ಥಿತಿಯಲ್ಲಿ, ಈ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ಉಪಯುಕ್ತ. ಅದರ ಪ್ಯಾಕಿಂಗ್‌ನಲ್ಲಿ ಬಳಸುತ್ತಿರುವ ಪಾಲಿಥಿನ್ ಕೂಡ ಕೊಳೆಯುತ್ತದೆ ಇದು ಪಾಲಿಲ್ಯಾಕ್ಟಿಕ್ ಆಮ್ಲ ಅಂದರೆ PLA ಯಿಂದ ಮಾಡಲ್ಪಟ್ಟಿದೆ. ಇದನ್ನು ಜೋಳದ ಪಿಷ್ಟದಿಂದ ತಯಾರಿಸಲಾಗುತ್ತದೆ.
ಬೇಡಿಕೆ ಹೆಚ್ಚುತ್ತಿದೆ: ಜೈವಿಕ ವಿಘಟನೀಯ ಪ್ಯಾಡ್‌ಗಳ ಬಗ್ಗೆ ಮಹಿಳೆಯರಲ್ಲಿ ಹೆಚ್ಚಿನ ಜಾಗೃತಿ ಇಲ್ಲ. ಆದಾಗ್ಯೂ, ಈ ಉತ್ಪನ್ನಗಳ ಬೇಡಿಕೆಯು ನಿರಂತರವಾಗಿ ಹೆಚ್ಚುತ್ತಿದೆ. ಪ್ರತಿದಿನ 1000 ಜೈವಿಕ ವಿಘಟನೀಯ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಲಾಗುತ್ತಿದೆ. ಇದರ ಬೆಲೆ ಹೆಚ್ಚಿಲ್ಲ. ಈ ಸ್ಯಾನಿಟರಿ ಪ್ಯಾಡ್‌ಗಳು ಸಾಮಾನ್ಯ ಸ್ಯಾನಿಟರಿ ಪ್ಯಾಡ್‌ಗಳ ಬೆಲೆಯಲ್ಲಿಯೇ ಲಭ್ಯವಿದೆ ಎಂದು ರಿಚಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ಬಳಸಬಹುದಾದ ಪರಿಸರ ಸ್ನೇಹಿ ಉತ್ಪನ್ನಗಳು ಯಾವುವು?