ಚಂಡೀಗಢ(ಪಂಜಾಬ್): ಪಂಜಾಬ್ ರಾಜಧಾನಿ ಚಂಡೀಗಢದ ಸೆಕ್ಟರ್ 17ರ ಪರೇಡ್ ಮೈದಾನದಲ್ಲಿ 39ನೇ ಹುನಾರ್ ಹಾಟ್ ಆಯೋಜನೆಗೊಂಡಿದೆ. ದೇಶದೆಲ್ಲೆಡೆಯ ವಿವಿಧ ತಿಂಡಿ-ತಿನಿಸುಗಳು, ಕರಕುಶಲ ವಸ್ತುಗಳು ಇಲ್ಲಿ ಪ್ರದರ್ಶನವಾಗುತ್ತಿವೆ. ಇದರಲ್ಲಿ ಪ್ರಮುಖವಾಗಿ ಬಿಹಾರದ 'ಲಿಟ್ಟಿ ಚೋಖಾ' ಎಂಬ ಖಾದ್ಯ ಆಹಾರಪ್ರಿಯರ ಮನಸ್ಸು ಗೆದ್ದಿದೆ. ಇದರ ರುಚಿಗೆ ಜನರು ಫಿದಾ ಆಗಿದ್ದಾರೆ.
ಗುಡಿಸಲು ಮಾದರಿಯಲ್ಲಿ ಆಹಾರ ಮಳಿಗೆ ನಿರ್ಮಾಣಗೊಂಡಿದ್ದು, ಬಿಹಾರದ ಸ್ಟಾಲ್ವೊಂದರಲ್ಲಿ ಲಿಟ್ಟಿ ಚೋಖಾ ತಯಾರಿಸಲಾಗುತ್ತಿದೆ. ಇಲ್ಲಿಗೆ ಆಗಮಿಸುತ್ತಿರುವ ಜನರಿಂದ ಈ ಆಹಾರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಹೀಗಾಗಿ ಪ್ರತಿದಿನ 70ರಿಂದ 75 ಸಾವಿರ ಲಿಟ್ಟಿ ಚೋಖಾ ಮಾರಾಟವಾಗ್ತಿದ್ದು, ಪ್ರತಿದಿನ ಅಂದಾಜು 70 ಸಾವಿರ ರೂ. ಗಳಿಕೆಯಾಗುತ್ತಿದೆ ಎಂದು ಅಂಗಡಿ ಮಾಲೀಕ ಫೂಲ್ ಶಾ ತಿಳಿಸಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯ : 18 ಗಂಟೆಗಳ ಕಾಲ ಲಾಕರ್ ಕೋಣೆಯಲ್ಲಿ ಕಳೆದ 89ರ ವೃದ್ಧ!
ಬಿಹಾರದ ಪ್ರಸಿದ್ಧ ಖಾದ್ಯವಾಗಿರುವ ಲಿಟ್ಟಿ ಚೋಖಾ ತಯಾರಿಸಲು ಗೋಧಿ ಹಿಟ್ಟು ಬಳಕೆ ಮಾಡಲಾಗುತ್ತದೆ. ಮಸಾಲೆ ಪದಾರ್ಥ ಹಾಕಿ, ತದನಂತರ ಹುರಿಯಲಾಗುತ್ತದೆ. ಇದಾದ ಬಳಿಕ ದೇಸಿ ತುಪ್ಪದಲ್ಲಿ ಅದ್ದಿ, ಚಟ್ನಿ ಜೊತೆ ತಿನ್ನಲು ಈ ಖಾರ ಖಾದ್ಯವನ್ನು ಗ್ರಾಹಕರಿಗೆ ನೀಡಲಾಗುತ್ತದೆ.
ಹುನಾರ್ ಹಾಟ್ನಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ದೆಹಲಿ, ನಾಗಾಲ್ಯಾಂಡ್, ಮಧ್ಯಪ್ರದೇಶ, ಮಣಿಪುರ, ಬಿಹಾರ, ಆಂಧ್ರಪ್ರದೇಶ, ಜಾರ್ಖಂಡ್, ಗೋವಾ, ಪಂಜಾಬ್, ಲಡಾಖ್, ಕರ್ನಾಟಕ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಛತ್ತೀಸ್‌ಗಢ, ತಮಿಳುನಾಡು ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳು ಭಾಗಿಯಾಗಿದ್ದು, ತಮ್ಮ ತಮ್ಮ ರಾಜ್ಯಗಳ ಕರಕುಶಲ ವಸ್ತುಗಳು ಹಾಗೂ ವಿಶೇಷ ತಿಂಡಿ ಪದಾರ್ಥಗಳ ಮಾರಾಟ ನಡೆಯುತ್ತಿದೆ. ಮಾರ್ಚ್ 25ರಿಂದ ಆರಂಭಗೊಂಡಿರುವ ಈ ಮೇಳ ಏಪ್ರಿಲ್ 3ರವರೆಗೆ ನಡೆಯಲಿದೆ.