ಭುವನೇಶ್ವರ: ಇಡೀ ದೇಶದಲ್ಲೇ ಒಡಿಶಾದ ರಾಜಧಾನಿ ಭುವನೇಶ್ವರ ನೂರಕ್ಕೆ ನೂರರಷ್ಟು ಮಂದಿಗೆ ಲಸಿಕೆ ಹಾಕಿದ ಹೆಗ್ಗಳಿಕೆಗೆ ಪಾತ್ರವಾಗಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರೂ ಮುಕ್ತ ಮನಸ್ಸಿನಿಂದ ಲಸಿಕೆ ಪಡೆದು ಮಾದರಿಯಾಗಿದ್ದಾರೆ.
ರಾಜ್ಯದಲ್ಲಿನ ಹೊಸ ಸೋಂಕು ಮತ್ತು ಕೋವಿಡ್ ಸಾವುನೋವುಗಳನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ. ಆಗಸ್ಟ್ 2 ರೊಳಗೆ 18,77,178 ಡೋಸ್ ಲಸಿಕೆ ನೀಡಲಾಗಿದ್ದು, 10,71,676 ಜನರು ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. 8,05,502 ಫಲಾನುಭವಿಗಳು ಎರಡನೇ ಡೋಸ್ ಪಡೆದಿದ್ದಾರೆ. ನಗರವು 100 ಪ್ರತಿಶತ ಲಸಿಕೆ ನೀಡುವ ಗುರಿ ಸಾಧಿಸಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
18 ವರ್ಷ ದಾಟಿದ ಎಲ್ಲಾ ಅರ್ಹರಿಗೆ ಪೆಟ್ರೋಲ್ ಬಂಕ್, ರಸ್ತೆ ಮಧ್ಯೆ, ಅಂಗನವಾಡಿ ಕೇಂದ್ರಗಳು, ಆಸ್ಪತ್ರೆಗಳು, ಶಾಲಾ-ಕಾಲೇಜುಗಳು ಸೇರಿದಂತೆ ವಿವಿಧ ಭಾಗಗಳಲ್ಲಿ ಲಸಿಕೆ ಹಾಕುವ ಮೂಲಕ ನಾವು100 % ಲಸಿಕೆ ನೀಡುವ ಗುರಿ ಸಾಧಿಸಿದ್ದೇವೆ ಎಂದು ಬಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭುವನೇಶ್ವರದಲ್ಲಿ ಒಟ್ಟು 1,00,607 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 97,154 ಮುಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ 2,595 ಸಕ್ರಿಯ ಪ್ರಕರಣಗಳಿದ್ದು, 837 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.