ಭೋಪಾಲ್ (ಮಧ್ಯಪ್ರದೇಶ): ವಂದೇ ಭಾರತ್ ರೈಲಿನ ಶೌಚಾಲಯ ಬಳಸಿದ ವ್ಯಕ್ತಿಯೊಬ್ಬರು 6 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ರೈಲಿನ ಶೌಚಾಲಯ ಬಳಸಿದ್ದಕ್ಕೆ ಇಷ್ಟೊಂದು ಹಣ ಪಾವತಿಸಿದರೇ? ಅಂತ ನೀವು ಕೇಳಬಹುದು. ಭೋಪಾಲ್ನಲ್ಲಿ ಅಚ್ಚರಿಯ ಘಟನೆ ನಡೆದಿದೆ.
ತೆಲಂಗಾಣದ ಸಿಂಗ್ರೌಲಿ ಮೂಲದ ಅಬ್ದುಲ್ ಖಾದರ್ ಜುಲೈ 15ರಂದು ತಮ್ಮ ಕುಟುಂಬದೊಂದಿಗೆ ಭೋಪಾಲ್‌ಗೆ ಬಂದಿದ್ದರು. ಸಿಂಗ್ರೌಲಿಗೆ ಹಿಂತಿರುಗಲು ಭೋಪಾಲ್ ರೈಲು ನಿಲ್ದಾಣದಲ್ಲಿ ದಕ್ಷಿಣ್ ಎಕ್ಸ್‌ಪ್ರೆಸ್ ರೈಲಿಗಾಗಿ ಕಾಯುತ್ತಿದ್ದರು. ಇದೇ ಸಂದರ್ಭದಲ್ಲಿ ಅವರು ಮೂತ್ರ ವಿಸರ್ಜನೆಗೆ ತುರ್ತಾಗಿ ಹೋಗಬೇಕಿತ್ತು. ಆದರೆ, ತಾವು ತೆರಳಬೇಕಿದ್ದ ರೈಲು ಬರಲು ಸಾಕಷ್ಟು ಸಮಯವಿದ್ದುದರಿಂದ ನಿಲ್ದಾಣದ ಶೌಚಾಲಯಕ್ಕೆ ತೆರಳಲು ಯೋಚಿಸಿದ್ದರು. ಅಷ್ಟರಲ್ಲಿ ನಿಲ್ದಾಣದಲ್ಲಿ ವಂದೇ ಭಾರತ್ ರೈಲು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿತ್ತು.
ಈ ರೈಲು ಕಂಡ ತಕ್ಷಣ ಅಬ್ದುಲ್ ಖಾದರ್‌ಗೆ ವಂದೇ ಭಾರತ್ ರೈಲು ನೋಡುವ ಕುತೂಹಲವೂ ಮೂಡಿದೆ. ಜೊತೆಗೆ, ಮೂತ್ರ ವಿಸರ್ಜನೆ ತುರ್ತು ಕೂಡಾ ಕಾಡಿದೆ. ಇದೇ ನೆಪದಲ್ಲಿ ವಂದೇ ಭಾರತ್ ರೈಲು ಹತ್ತಿದ್ದಾರೆ. ರೈಲಿನ ಶೌಚಾಲಯ ಕೊಠಡಿಗೆ ಹೋಗಿ ಮೂತ್ರ ವಿಸರ್ಜನೆ ಮುಗಿಸಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗೆ ರೈಲು ಹೊರಟೇ ಬಿಟ್ಟಿತ್ತು.
ವಂದೇ ಭಾರತ್ ರೈಲಿನಲ್ಲಿ ಸ್ವಯಂಚಾಲಿತ ಲಾಕ್ ವ್ಯವಸ್ಥೆ ಇರುವುದರಿಂದ ರೈಲು ಹೊರಟ ಕೂಡಲೇ ಈತನಿದ್ದ ಬಾಗಿಲು ಕೂಡ ಲಾಕ್ ಆಗಿದೆ. ಈ ವಿಚಾರ ಖಾದರ್‌ಗೆ ತಿಳಿಯಲಿಲ್ಲ. ಇದರಿಂದ ಗಾಬರಿಗೊಂಡ ಆತ ಟಿಟಿ ಮತ್ತು ಪೊಲೀಸರ ಸಹಾಯ ಕೇಳಿದ್ದಾರೆ. ಆದರೆ ಅವರು ಸಹಾಯದ ಬದಲು ಟಿಕೆಟ್ ಇಲ್ಲದೆ ರೈಲು ಹತ್ತಿದ ಕಾರಣಕ್ಕೆ ದಂಡ ಹಾಕಿದ್ದಾರೆ. ರೈಲು ಭೋಪಾಲ್ ರೈಲು ನಿಲ್ದಾಣದಿಂದ ಉಜ್ಜಯಿನಿಗೆ ಹೋಗುತ್ತಿತ್ತು. ಆದ್ದರಿಂದ ಈತ ಉಜ್ಜಯಿನಿಗೆ 1,020 ರೂಪಾಯಿ ಕೊಟ್ಟು ಟಿಕೆಟ್ ತೆಗೆದುಕೊಳ್ಳಬೇಕಾಯಿತು.
ಇಲ್ಲಿಗೆ ಸಮಸ್ಯೆ ಮುಗಿಯಲಿಲ್ಲ. ಈತ ಮತ್ತೆ ಉಜ್ಜಯಿನಿಯಿಂದ ಭೋಪಾಲ್‌ಗೆ ತೆರಳಲು 800 ರೂಪಾಯಿ ಖರ್ಚು ಮಾಡಿದ್ದಾರೆ. ಇದೇ ವೇಳೆ ಮೊದಲೇ ದಕ್ಷಿಣ ಎಕ್ಸ್‌ಪ್ರೆಸ್ ರೈಲಿಗೆ ಟಿಕೆಟ್ ಮಾಡಿದ್ದು, ಈತ ಇಲ್ಲಿ ಬಾಕಿಯಾದ ಕಾರಣ ಆ ರೈಲಿನಲ್ಲಿ ಆತನ ಕುಟುಂಬ ಹೋಗದೇ ಮತ್ತೆ ರೈಲಿನ ಟಿಕೆಟ್‌ಗಾಗಿ 4000 ರೂಪಾಯಿ ನಷ್ಟ ಅನುಭವಿಸಿದ್ದಾರೆ. ಒಟ್ಟಿನಲ್ಲಿ ಮೂತ್ರ ವಿಸರ್ಜನೆಗೆಂದು ವಂದೇ ಭಾರತ್ ರೈಲು ಹತ್ತಿದ ಅಬ್ದುಲ್ ಖಾದಿರ್ಗೆ ಸುಮಾರು 6,000 ರೂಪಾಯಿ ನಷ್ಟವಾಗಿದೆ.
ಈ ಹಿಂದೆ ನಡೆದ ಘಟನೆಗಳು..: ಭೋಪಾಲ್ ಮೂಲದ ಮಹಿಳೆಯೊಬ್ಬರು ತನ್ನ ಮಗನೊಂದಿಗೆ ಕೇವಲ ಸೆಲ್ಫಿ ತೆಗೆದುಕೊಳ್ಳಲು ವಂದೇ ಭಾರತ್ ರೈಲಿಗೆ ಹತ್ತಿದ್ದಾರೆ. ಆದರೆ ರೈಲು ಪ್ರಾರಂಭವಾಗಿ ಬಾಗಿಲುಗಳು ಲಾಕ್ ಆಗಿದ್ದವು. ಮಹಿಳೆ ಮಾತ್ರ ಇನ್ನೂ ವಿಭಿನ್ನ ಭಂಗಿಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಲೇ ಇದ್ದಳು. ಕೊನೆಗೆ ತನ್ನ ಸೆಲ್ಫಿಗಾಗಿ ಸುಮಾರು 5 ಸಾವಿರದ 470 ರೂಪಾಯಿ ಖರ್ಚು ಮಾಡಿ, ಝಾನ್ಸಿ ರೈಲು ನಿಲ್ದಾಣದಲ್ಲಿ ಇಳಿದು ನಂತರ ತನ್ನ ರೈಲು ಸ್ಟೇಷನ್‌ಗೆ ಬರಬೇಕಾಯಿತು.
ಇದನ್ನೂ ಓದಿ: ಮೂತ್ರ ವಿಸರ್ಜನೆಗೆ ಹೋದ ಸಮಯದಲ್ಲೇ ಮಹಿಳೆಗೆ ಹೆರಿಗೆ.. ಕೆಳಗಡೆ ಬಿದ್ದು ಮಗು ಸಾವು