ಹೈದರಾಬಾದ್: ಯುವತಿಯೊಬ್ಬಳು ಪೊಲೀಸ್ ಠಾಣೆಗೆ ಬಂದು ರಾದ್ಧಾಂತ ಸೃಷ್ಟಿಸಿದ ಘಟನೆ ಬಾಚಪಲ್ಲಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ನೆಲ್ಲೋರ್ ಜಿಲ್ಲೆಯವಳಾದ ಯುವತಿ ತನ್ನ ಕುಟುಂಬಸ್ಥರೊಂದಿಗೆ ಹೈದರಾಬಾದ್ನಲ್ಲಿ ಚಿತ್ರಾಪುರ ಕಾಲೋನಿಯಲ್ಲಿ ವಾಸವಾಗಿದ್ದಾಳೆ. ಬಾಚಪಲ್ಲಿಯಲ್ಲಿ ತನ್ನ ಪ್ರಿಯಕರ ಚಂದು ತನ್ನೊಂದಿಗೆ ಮಾತನಾಡುತ್ತಿಲ್ಲ, ಫೋನ್ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಠಾಣೆಯ ಬಾಗಿಲಿಗೆ ತನ್ನ ತಲೆಯನ್ನ ಚಚ್ಚಿಕೊಂಡು ಕೂಗಾಡಿದ್ದಾಳೆ.
ಇದಕ್ಕೂ ಮುನ್ನ ತನ್ನ ಪ್ರಿಯಕರ ಚಂದು ಮನೆಗೂ ತೆರಳಿದ್ದ ಯುವತಿ ನಿರಾಸೆಗೊಂಡು ಅಲ್ಲಿಂದು ಹಿಂದಿರುಗಿದ್ದಳಂತೆ. ಈ ಹಿಂದೆ ಪೊಲೀಸ್ ಠಾಣೆಗೆ ಬಂದಿದ್ದ ಈಕೆ ಎಷ್ಟೇ ಸಮಾಧಾನಪಡಿಸಿದರೂ ಸುಮ್ಮನಾಗಿರಲಿಲ್ಲವಂತೆ. ಇಂದು ಮತ್ತೊಮ್ಮೆ ಪೊಲೀಸ್ ಠಾಣೆಗೆ ಬಂದಿದ್ದ ಈಕೆ ಪ್ರಿಯಕರನೊಂದಿಗೆ 10 ನಿಮಿಷಗಳ ಕಾಲ ಮಾತನಾಡಲು ವ್ಯವಸ್ಥೆ ಮಾಡುವಂತೆ ಪೊಲೀಸರನ್ನು ಕೇಳಿಕೊಂಡಿದ್ದಾಳೆ. ಇಲ್ಲದಿದ್ದರೆ ಠಾಣೆಯಲ್ಲೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.
ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಯುವತಿ ಕೇಳಿಲ್ಲ. ಅಂತಿಮವಾಗಿ ಬಾಚಪಲ್ಲಿ ಇನ್ಸ್ಪೆಕ್ಟರ್ ಜಗದೀಶ್ವರ್ ಅವರು ಮಹಿಳಾ ಪೊಲೀಸ್ ವಿಭಾಗವಾದ ಶಿ ತಂಡವನ್ನ (She Team) ಕರೆದು ಸಮಾಲೋಚನೆ ನಡೆಸಿದ್ದಾರೆ.
ನಂತರ ಯುವತಿಯನ್ನ ಆಕೆಯ ಸಹೊದರನೊಂದಿಗೆ ಕಳುಹಿಸಿ ಕೊಡಲಾಗಿದೆ. ಇನ್ನು ಯುವತಿ ತನ್ನ ಪ್ರಿಯಕರನನ್ನ ವಾಪಸ್ ಕರೆಸುವಮತೆ ದೂರು ನೀಡಲು ನಿರಾಕರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಈ ಹಿಂದೆ ರಾಯದುರ್ಗಂ ಠಾಣೆಯಲ್ಲೂ ಇದೇ ರೀತಿ ವರ್ತಿಸಿದ್ದಳು ಎಂದು ತಿಳಿದುಬಂದಿದೆ.