ಲಕ್ನೋ: ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಅಪರಾಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯನಿರ್ವಹಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ವೇಗವಾಗಿ ಮತ್ತು ಗಂಭೀರವಾಗಿ ಕಾರ್ಯನಿರ್ವಹಿಸುವಂತೆ ಅವರು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
2019ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಾರ, ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಶೇಕಡಾ 55.2ರಷ್ಟು ಶಿಕ್ಷೆಯ ಪ್ರಮಾಣವನ್ನು ರಾಜ್ಯವು ವರದಿ ಮಾಡಿದೆ.
ರಾಜ್ಯದಲ್ಲಿ 2019ರಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ 8,059 ಪ್ರಕರಣಗಳಿಗೆ ಶಿಕ್ಷೆ ವಿಧಿಸಲಾಗಿದೆ. ಇದು ದೇಶದಲ್ಲಿ ಅತಿ ಹೆಚ್ಚಾಗಿದೆ. ನಂತರದ ಸ್ಥಾನ ರಾಜಸ್ಥಾನ 5,625 ಪ್ರಕರಣಗಳಿಗೆ ಶಿಕ್ಷೆ ವಿಧಿಸಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದು, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಗಾಗಿ ಕುಟುಂಬಗಳೊಂದಿಗೆ ಜನರು ಒಗ್ಗೂಡಬೇಕಾಗುತ್ತದೆ. ಆಗ ಮಾತ್ರ ಆಡಳಿತಗಾರರು ತಮ್ಮ ದುರಹಂಕಾರದಿಂದ ಎಚ್ಚರಗೊಳ್ಳುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಅತ್ಯಾಚಾರದ ಪ್ರತಿಯೊಂದು ಪ್ರಕರಣದಲ್ಲೂ ಹಥ್ರಾಸ್ ಅಥವಾ ಬಾರಾ, ಬಲರಾಂಪುರ ಪ್ರಕರಣಗಳಲ್ಲಿ, ಸರ್ಕಾರವು ಧರ್ಮ, ಜಾತಿ, ವರ್ಗ, ಮತ ಮತ್ತು ಪ್ರಭಾವದ ಪಕ್ಷಪಾತದ ರಾಜಕಾರಣವನ್ನು ಬದಿಗಿಟ್ಟು ಮಹಿಳೆಯರ ಸುರಕ್ಷತೆಗಾಗಿ ಪ್ರತಿಜ್ಞೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.