ಮುಂಬೈ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಹಣ ವಿತ್ಡ್ರಾ ಮಾಡುವುದಕ್ಕೆ ವಿಧಿಸಲಾಗಿದ್ದ ಗರಿಷ್ಠ ಮಿತಿ ಬುಧವಾರ ಸಂಜೆ ವೇಳೆಗೆ ಕೊನೆಯಾದರೂ ಗುರುವಾರ ಯೆಸ್ ಬ್ಯಾಂಕಿನ ಬಹುತೇಕ ಬ್ರಾಂಚ್ಗಳಲ್ಲಿ ಜನಸಂದಣಿ ಮಾತ್ರ ಕಂಡು ಬರಲಿಲ್ಲ.
ಕಳೆದ 13 ದಿನಗಳ ಹಿಂದೆ ಯೆಸ್ ಬ್ಯಾಂಕ್ ಭಾರಿ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಗ್ರಾಹಕರಿಗೆ ವಿತ್ಡ್ರಾ ಮಿತಿ ವಿಧಿಸಿತ್ತು. ಆಗ ಗ್ರಾಹಕರು ಎಲ್ಲಿ ತಮ್ಮ ಹಣ ಮುಳುಗಿ ಹೋಗುವುದೋ ಎಂದು ಚಿಂತಾಕ್ರಾಂತರಾಗಿ ಬ್ಯಾಂಕಿನ ಶಾಖೆಗಳಿಗೆ ಅಲೆದಾಡಿದ್ದರು. ಈಗ ಬುಧವಾರ ಸಂಜೆ 6ಕ್ಕೆ ವಿತ್ಡ್ರಾ ಮಿತಿಯ ನಿಯಮ ತೆರವುಗೊಳಿಸಲಾಗಿದೆ. ಹೀಗಾಗಿ ಗುರುವಾರದಂದು ಭಾರಿ ಸಂಖ್ಯೆಯ ಗ್ರಾಹಕರು ತಮ್ಮ ಹಣ ಪಡೆಯಲು ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ರೀತಿಯ ಜನದಟ್ಟಣೆ ಶಾಖೆಗಳಲ್ಲಿ ಕಂಡು ಬಂದಿಲ್ಲ.
ಕೊರೊನಾ ವೈರಸ್ ಪರಿಣಾಮ ಅಥವಾ ಸ್ಟೇಟ್ ಬ್ಯಾಂಕ್ ನೀಡಿದ ಭರವಸೆ, ಇವೆರಡೂ ಕೆಲಸ ಮಾಡಿದಂತೆ ಕಾಣುತ್ತದೆ.
'ಯೆಸ್ ಬ್ಯಾಂಕ್ ಮುಚ್ಚುವುದಿಲ್ಲ ಎಂದು ನಮಗೆ ಖಾತರಿಯಾಗಿದೆ. ಎಸ್ಬಿಐ ನಂಥ ದೊಡ್ಡ ಬ್ಯಾಂಕ್ ಯೆಸ್ ಬ್ಯಾಂಕ್ ಬೆಂಬಲಕ್ಕೆ ನಿಂತಿರುವುದರಿಂದ ನಮ್ಮಲ್ಲಿ ವಿಶ್ವಾಸ ಮೂಡಿದೆ' ಎಂದು ಮುಂಬೈನ ಶಾಖೆಯೊಂದಕ್ಕೆ ಬಂದಿದ್ದ ಗ್ರಾಹಕ ಅನಿಸಿಕೆ ವ್ಯಕ್ತಪಡಿಸಿದರು.
ಯೆಸ್ ಬ್ಯಾಂಕ್ ಪುನಶ್ಚೇತನ ಯೋಜನೆ ಅಂಗವಾಗಿ ಎಸ್ಬಿಐ ಹಾಗೂ ಇನ್ನಿತರ ಏಳು ಹಣಕಾಸು ಸಂಸ್ಥೆಗಳು ಯೆಸ್ ಬ್ಯಾಂಕ್ನಲ್ಲಿ 10,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿವೆ.