ನವದೆಹಲಿ: ಪ್ರಸ್ತುತ ದಿನದಲ್ಲಿ ಹಣದ ಕೊರತೆಯಿಂದ ಬಳಲುತ್ತಿರುವ ಯೆಸ್ ಬ್ಯಾಂಕ್ ಸುಸ್ಥಿತಿಗೆ ತರಲು ಕರಡು ಯೋಜನೆಯನ್ನು ಈಗಾಗಲೇ ಸಿದ್ದಪಡಿಸಿದ್ದು, ಶೇ.49 ರಷ್ಟು ಪಾಲನ್ನು ತೆಗೆದುಕೊಳ್ಳುವ ಸಾಧ್ಯತೆಗೆ ಆಡಳಿತ ಮಂಡಳಿಯು ತಾತ್ವಿಕವಾಗಿ ಅನುಮೋದನೆ ನೀಡಿದೆ ಎಂದು ಸ್ಟೇಟ್ ಆಫ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧ್ಯಕ್ಷ ರಜನೀಶ್ ಕುಮಾರ್ ತಿಳಿಸಿದ್ದಾರೆ.
ಈ ಯೋಜನೆಯ ಬಗ್ಗೆ ಎಸ್‌ಬಿಐ ಮತ್ತು ಬ್ಯಾಂಕಿನ ಕಾನೂನು ತಂಡ ಕರಡು ಯೋಜನೆ ಸಿದ್ದತೆಗಾಗಿ ಕಾರ್ಯ ನಿರ್ವಹಿಸುತ್ತಿದೆ. ಯೆಸ್ ಬ್ಯಾಂಕಿನಲ್ಲಿ ಶೇ.49 ವರೆಗಿನ ಪಾಲನ್ನು ತೆಗೆದುಕೊಳ್ಳುವ ಸಾಧ್ಯತೆಯ ಬಗ್ಗೆ ಅನ್ವೇಷಿಸಲು ಎಸ್‌ಬಿಐ ಮಂಡಳಿಯು ತಾತ್ವಿಕವಾಗಿ ಅನುಮೋದನೆ ನೀಡಿದೆ ಎಂದಿರುವ ಅವರು, ನಾವು ಈಗಾಗಲೇ ಸ್ಟಾಕ್ ಎಕ್ಸೆಂಜ್ ಮೂಲಕ ಉಲ್ಲೇಖಿಸಲಾಗಿದೆ ಎಂದು ರಜನೀಶ್ ಹೇಳಿದ್ದಾರೆ.
ಈಗಾಗಲೇ ಸಿದ್ದಪಡಿಸಿರುವ ಕರಡು ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಲು ಆರಬಿಐಗೆ ಎಸ್‌ಬಿಐ ವತಿಯಿಂದ ವಿನಂತಿ ಮಾಡಲಾಗಿದ್ದು, ಈ ಬಗ್ಗೆ ಸೋಮವಾರದಂದು ಆರ್ಬಿಐ ಪ್ರತಿಕ್ರಿಯೆ ನೀಡಲಿದೆ ಎಂದು ತಿಳಿದು ಬಂದಿದೆ.
ಇದೇ ವೇಳೆ, ಯೆಸ್ ಬ್ಯಾಂಕಿನಲ್ಲಿ ಠೇವಣಿ ಇರಸಲಾದ ಗ್ರಾಹಕರ ಹಣಕ್ಕೆ ಯಾವುದೇ ಅಪಾಯವಿಲ್ಲ, ಗ್ರಾಹಕರ ಹಣ ಸುಭದ್ರವಾಗಿರಲಿದೆ, ಎಸ್‌ಬಿಐ ಈಗಾಗಲೇ ಅನೇಕ ಸಂಭಾವ್ಯ ಹೂಡಿಕೆದಾರರನ್ನು ಸಂಪರ್ಕಿಸಿದೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ ಮತ್ತಷ್ಟು ಕುಸಿಯದಂತೆ ತಡೆಯಲು ಆರ್ಬಿಐ ಕ್ರಮ ಕೈಗೊಂಡಿದ್ದು, ಏಪ್ರಿಲ್ 3ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಯೆಸ್ ಬ್ಯಾಂಕ್ ವ್ಯವಹಾರದ ಮೇಲೆ ನಿಷೇಧವನ್ನು ಹೇರಿದೆ. ಗ್ರಾಹಕರು 50,000ವರೆಗೆ ಮಾತ್ರ ಹಣ ಹಿಂಪಡೆಯಲು ಅವಕಾಶ ನೀಡಲಾಗಿದೆ ಎಂಬುದಾಗಿಯೂ ಅವರು ನೆನಪಿಸಿದ್ದಾರೆ.