ಮುಂಬೈ: 'ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಅಭಿನಯದ ಚಪಾಕ್ ಚಿತ್ರ ಬಹಿಷ್ಕರಿಸುವುದು ಒಂದ್ರೀತಿ ತಾಲಿಬಾನಿ ಕ್ರಮ' ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಅಭಿಪ್ರಾಯ ಪಟ್ಟಿದ್ದಾರೆ. ಮುಂಬೈನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ತಾಲಿಬಾನಿ ಕ್ರಮದಿಂದಾಗಿ ಈ ದೇಶವನ್ನು ನಡೆಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಹಾಗೂ ಬಲಪಂಥೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
![Wrong to boycott Deepika or her film](https://etvbharatimages.akamaized.net/etvbharat/prod-images/5682581_688_5682581_1578813826872.png)
ಈ ಮೂಲಕ ಪೊಲೀಸರಿಂದ ಹಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಸಲುವಾಗಿ ದೆಹಲಿಯ ಜೆಎನ್‌ಯು ಕ್ಯಾಂಪಸ್‌ಗೆ ಭೇಟಿದ್ದ ದೀಪಿಕಾ ಪಡುಕೋಣೆ ಪರ ಶಿವಸೇನಾ ನಾಯಕ ಸಂಜಯ್ ರಾವತ್ ಬ್ಯಾಟಿಂಗ್ ಮಾಡಿದ್ದಾರೆ. ಜೆಎನ್ಯುಗೆ ಭೇಟಿ ನೀಡಿದ ನಂತರ ಬಿಜೆಪಿ ನಾಯಕರು ದೀಪಿಕಾರನ್ನು ಟೀಕಿಸಲು ಮುಂದಾದರು. ದೇಶದ ಹಲವೆಡೆ ಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯಿಸಲಾಗಿತ್ತು. ಇದರಿಂದಾಗಿ ಚಿತ್ರ ಗಳಿಕೆಯ ಮೇಲೆ ದುಷ್ಪರಿಣಾಮ ಬೀರಬಹುದೆಂದು ಹೇಳಲಾಗುತ್ತಿತ್ತು. ಆದರೆ, ಕಾಂಗ್ರೆಸ್ ನಾಯಕರು ಚಪಾಕ್ ಚಿತ್ರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ಚಿತ್ರ ನಿರ್ದೇಶಕಿ ಮೇಘನಾ ಗುಲ್ಜಾರ್ಗೆ ಹಾಗೂ ನಿರ್ಮಾಪಕರಿಗೆ ರಿಲೀಫ್ ಒದಗಿಸಿತ್ತು.
ಮಧ್ಯಪ್ರದೇಶ ಹಾಗೂ ಛತ್ತೀಸ್ಗಢದಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಚಪಾಕ್ ಚಿತ್ರಕ್ಕೆ ತೆರಿಗೆ ಮುಕ್ತಗೊಳಿಸಿವೆ. ಈ ಮೂಲಕ ಚಲನಚಿತ್ರಗಳ ಮೇಲೆ ವಿಧಿಸುವ ಮನರಂಜನಾ ತೆರಿಗೆಯನ್ನು ತೆಗೆದುಹಾಕಲಾಗಿದೆ. ಸಹಜವಾಗಿಯೇ ಇದರಿಂದಾಗಿ ಟಿಕೆಟ್ ದರ ಕಡಿಮೆಯಾಗಲಿದೆ. ಹೆಚ್ಚಿನ ಜನರು ಇದನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಪಂಜಾಬ್ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಈ ಚಲನಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಿ ಚಲನಚಿತ್ರಕ್ಕೆ ಪ್ರೋತ್ಸಾಹ ನೀಡಲಾಗಿದೆ.
ಈಗಾಗಲೇ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಳೆದುಕೊಂಡಿರುವ ಶಿವಸೇನೆ ಮತ್ತೊಮ್ಮೆ ಬಿಜೆಪಿ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಟೀಕಿಸುವ ಮೂಲಕ ಎಡಪಂಥೀಯ ಪಕ್ಷಗಳಲ್ಲಿ ಬೆರೆಯುವ ಸೂಚನೆ ನೀಡುತ್ತಿದೆ. ಇದು ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆಯ ಕಂದಕವನ್ನು ಮತ್ತಷ್ಟು ದೊಡ್ಡದು ಮಾಡುತ್ತದೆ ಎಂದು ಅಭಿಪ್ರಾಯಪಡಲಾಗಿದೆ.