ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಆಚರಿಸುವ ಉದ್ದೇಶವೆಂದರೆ ಪ್ರಪಂಚದಾದ್ಯಂತ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಪ್ರಯತ್ನಗಳನ್ನು ಸಜ್ಜುಗೊಳಿಸುವುದು. ಈ ವರ್ಷ ಮಾನಸಿಕ ಆರೋಗ್ಯವು ಪ್ರಪಂಚದಾದ್ಯಂತ ಹೆಚ್ಚು ಚರ್ಚಿಸಲ್ಪಟ್ಟ ವಿಷಯವಾಗಿದೆ. ಏಕೆಂದರೆ ಮಾರಣಾಂತಿಕ ಕೊರೊನಾ ವೈರಸ್ ವ್ಯಾಪಕವಾಗಿದ್ದರಿಂದ ಇದು ಜನರ ಜೀವನದ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮ ಬೀರಿದೆ. ಪ್ರತಿ 40 ಸೆಕೆಂಡಿಗೆ ಒಬ್ಬರು ಆತ್ಮಹತ್ಯೆಗೆ ಶರಣಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ.
ಮಾನಸಿಕ ಆರೋಗ್ಯದ ಅವಶ್ಯಕತೆ ಉತ್ತೇಜಿಸುವ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ವಿಶ್ವ ಮಾನಸಿಕ ಆರೋಗ್ಯ ದಿನವನ್ನು 1992 ರ ಅಕ್ಟೋಬರ್ 10 ರಂದು ಆಚರಿಸಲಾಯಿತು. ಇದು ಪ್ರಸ್ತುತ ಜಗತ್ತಿನಲ್ಲಿ ನಾವು ಅನುಭವಿಸುತ್ತಿರುವ ಮಾನಸಿಕ ಆರೋಗ್ಯ, ಸವಾಲುಗಳ ಬಗ್ಗೆ ಬೆಳಕು ಚೆಲ್ಲುವ ಅವಕಾಶವನ್ನು ಒದಗಿಸುತ್ತದೆ.
ಮಾನಸಿಕ ಆರೋಗ್ಯದ ಬಗೆಗಿನ ಸಂಗತಿಗಳು:
- ಇತ್ತೀಚಿನ ವರ್ಷಗಳಲ್ಲಿ, ಜಾಗತಿಕ ಆರೋಗ್ಯ ಗುರಿಗಳನ್ನು ಸಾಧಿಸುವಲ್ಲಿ ಮಾನಸಿಕ ಆರೋಗ್ಯವು ಪ್ರಮುಖ ಪಾತ್ರ ವಹಿಸುತ್ತಿದೆ. ಮಾನಸಿಕ ಆರೋಗ್ಯವನ್ನು ಸುಸ್ಥಿರ ಅಭಿವೃದ್ಧಿ ಗುರಿಯ ಅಡಿ ಸೇರಿಸಿ ವಿವರಿಸಲಾಗಿದೆ.
- ಅಂಗವೈಕಲ್ಯವು ಖಿನ್ನತೆಗೆ ಪ್ರಮುಖ ಕಾರಣವಾಗಿದೆ. 15-29 ವರ್ಷ ವಯಸ್ಸಿನವರಲ್ಲಿ ಆತ್ಮಹತ್ಯೆಗೆ ಇದೇ ಎರಡನೇ ಪ್ರಮುಖ ಕಾರಣವಾಗಿದೆ. ದೈಹಿಕ ಪರಿಸ್ಥಿತಿಗಳಿಂದಾಗಿ ಮಾನಸಿಕ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟು ಜನರು ಅಕಾಲಿಕ ಸಾವಿಗೀಡಾಗುತ್ತಾರೆ
- ಕೆಲವು ದೇಶಗಳಲ್ಲಿ ಜನರು ಮಾನವ ಹಕ್ಕುಗಳ ಉಲ್ಲಂಘನೆ, ತಾರತಮ್ಯ ಮತ್ತು ಕಳಂಕಗಳಿಂದಾಗಿ ತೀವ್ರ ಮಾನಸಿಕ ಸಮಸ್ಯೆ ಅನುಭವಿಸುತ್ತಾರೆ.
- ಎಲ್ಲಾ ಕ್ಷೇತ್ರಗಳ ಮೇಲೆ ಗಣನೀಯ ಪರಿಣಾಮ ಬೀರುವ ಮಾನಸಿಕ ಆರೋಗ್ಯ ಪರಿಸ್ಥಿತಿಗಳು, ಖಿನ್ನತೆ ಮತ್ತು ಆತಂಕಗಳ ಚಿಕಿತ್ಸೆ, ಸುಧಾರಣೆ ಸಲುವಾಗಿ ಜಾಗತಿಕವಾಗಿ ಪ್ರತಿ ವರ್ಷ US $ 1 ಟ್ರಿಲಿಯನ್ ವೆಚ್ಚವಾಗುತ್ತದೆ.
- ಎಸ್‌ಎಮ್‌ಡಿ ಹೊಂದಿರುವ ವ್ಯಕ್ತಿಗಳು(ಅಂದರೆ, ಸ್ಕಿಜೋಫ್ರೇನಿಯಾ, ಇತರ ಮಾನಸಿಕ ಅಸ್ವಸ್ಥತೆಗಳು, ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್ ಮತ್ತು ಮಧ್ಯಮದಿಂದ ತೀವ್ರ ಖಿನ್ನತೆ) ಸಾಮಾನ್ಯ ಜನರಿಗಿಂತ ಸುಮಾರು 10 ರಿಂದ 20 ವರ್ಷಗಳ ಮೊದಲೇ ಸಾಯುತ್ತಾರೆ.
ಭಾರತದಲ್ಲಿ ಮಾನಸಿಕ ಆರೋಗ್ಯ:
ಭಾರತದಲ್ಲಿ, ಮಾನಸಿಕ ಆರೋಗ್ಯ ಸಮಸ್ಯೆಗಳ ಹೊರೆ 100,000 ಜನಸಂಖ್ಯೆಗೆ 2,443 ಗಳಷ್ಟಿದೆ ಎಂದು ಡಬ್ಲ್ಯುಹೆಚ್‌ಒ ಅಂದಾಜಿಸಿದೆ ಮತ್ತು 100,000 ಜನಸಂಖ್ಯೆಗೆ ಆತ್ಮಹತ್ಯೆ ಪ್ರಮಾಣ 21.1 ಆಗಿದೆ. ಭಾರತದಲ್ಲಿ, 2012-2030ರ ನಡುವೆ, ಮಾನಸಿಕ ಆರೋಗ್ಯದ ಕಾರಣದಿಂದಾಗಿ ಆರ್ಥಿಕ ನಷ್ಟವು 2010 ಡಾಲರ್‌ಗಳ 1.03 ಟ್ರಿಲಿಯನ್ ಆಗಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಮಾನಸಿಕ ಆರೋಗ್ಯ ಕಾರ್ಯಪಡೆಯು(ಪ್ರತಿ 100,000 ಜನಸಂಖ್ಯೆಗೆ) ಮನೋವೈದ್ಯರು (0.3), ದಾದಿಯರು (0.12) , ಮನಶ್ಶಾಸ್ತ್ರಜ್ಞರು (0.07) ಮತ್ತು ಸಾಮಾಜಿಕ ಕಾರ್ಯಕರ್ತರು (0.07) . ಭಾರತ ಜಾಗತಿಕವಾಗಿ ಸ್ತ್ರೀ ಆತ್ಮಹತ್ಯೆಗಳಲ್ಲಿ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚಿದೆ.
ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು:
- ಅಧ್ಯಯನಗಳು ಅನೇಕ ಮಹಿಳೆಯರು ಖಿನ್ನತೆಯಿಂದ ಬಳಲುತ್ತಿರುವುದಾಗಿ ವರದಿ ಮಾಡಿವೆ. ಲಾಕ್‌ಡೌನ್ ಸಮಯದಲ್ಲಿ ಹೆಚ್ಚಿದ ಮನೆಯ ಜವಾಬ್ದಾರಿಗಳು ಮತ್ತು ಕೌಟುಂಬಿಕ ಹಿಂಸಾಚಾರದ ತೀವ್ರತೆ ಇದಕ್ಕೆ ಕಾರಣವಾಗಿರಬಹುದು.
- 'ಇಂಡಿಯಾನಾ ವಿಶ್ವವಿದ್ಯಾಲಯ' ದ ಸಂಶೋಧಕರ ಹೊಸ ಅಧ್ಯಯನದ ಪ್ರಕಾರ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ವಯಸ್ಸಾದವರು ಹೆಚ್ಚಿನ ಖಿನ್ನತೆ ಮತ್ತು ಒಂಟಿತನವನ್ನು ಅನುಭವಿಸುತ್ತಿದ್ದಾರೆ.
- ಟೆಲಿಕಮ್ಯುಟಿಂಗ್ ಪ್ಲಾಟ್‌ಫಾರ್ಮ್ ಫ್ಲೆಕ್ಸ್‌ಜಾಬ್ಸ್‌ನ ಇತ್ತೀಚಿನ ಸಮೀಕ್ಷೆಗಳ ಪ್ರಕಾರ ನಿರುದ್ಯೋಗ ಸಮಸ್ಯೆಗಳು ವ್ಯಕ್ತಿಗಳನ್ನು ಮಾನಸಿವಾಗಿ ಕುಗ್ಗಿಸಿವೆ ಎಂಬುದನ್ನು ಬಹಿರಂಗಪಡಿಸಿವೆ.
ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಸಲಹೆಗಳು:
ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಿ:
ಇತರ ಜನರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವುದು ಮಾನಸಿಕ ಯೋಗಕ್ಷೇಮಕ್ಕೆ ಕಾರಣವಾಗುವ ಪ್ರಮುಖ ಅಂಶವಾಗಿದೆ. ಇದು ಸಮುದಾಯದಲ್ಲಿ ಕುಟುಂಬ, ಸ್ನೇಹಿತರು, ಕೆಲಸದ ಸಹಪಾಠಿಗಳು ಮತ್ತು ಇತರರನ್ನು ಒಳಗೊಂಡಿರಬಹುದು. ನಿಮ್ಮ ಸಂಬಂಧಗಳಲ್ಲಿ ಸಮಯ, ಪ್ರೀತಿ ಮತ್ತು ಶಕ್ತಿಯನ್ನು ಹೂಡಿಕೆ ಮಾಡುವುದರಿಂದ ಭಾಗಿಯಾಗಿರುವ ಎಲ್ಲರಿಗೂ ಉತ್ತಮ ಲಾಭವಾಗಬಹುದು.
ವ್ಯಾಯಾಮ ಮಾಡಿ ಆರೋಗ್ಯವಾಗಿರಿ:
ವ್ಯಾಯಾಮವು ಯೋಗಕ್ಷೇಮವನ್ನು ಹೆಚ್ಚಿಸುತ್ತದೆ ಮತ್ತು ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಉತ್ತಮ ದೈಹಿಕ ಆರೋಗ್ಯವು ಉತ್ತಮ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದೆ ಆದ್ದರಿಂದ ಆರೋಗ್ಯಕರ ಆಹಾರ, ಹೆಚ್ಚಿನ ಮಧ್ಯ ಅಥವಾ ಮಾದಕವಸ್ತುಗಳನ್ನು ತಪ್ಪಿಸುವುದು, ಉತ್ತಮ ನಿದ್ರೆ ಮಾಡುವುದು ಮತ್ತು ವೈದ್ಯರೊಂದಿಗೆ ನಿಯಮಿತವಾಗಿ ತಪಾಸಣೆ ಮಾಡಿಸುವುದರಿಂದ ಸಹಾಯವಾಗುತ್ತದೆ.
ನಿಮ್ಮ ಸಾಮರ್ಥ್ಯವನ್ನು ಗುರುತಿಸಿ ಮತ್ತು ಬಳಸಿ:
ನಾವೆಲ್ಲರೂ ವಿಭಿನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಹೊಂದಿದ್ದೇವೆ. ಆದರೆ ನಮ್ಮಲ್ಲಿನ ಪ್ರತಿಭೆಗಳನ್ನು ಕಂಡು ಕೊಂಡು ಅದನ್ನು ಬಳಸುವುದು ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಇತರರಿಗೆ ಸಹಾಯ ಮಾಡಲು ಅಥವಾ ಸಮುದಾಯಕ್ಕೆ ಕೊಡುಗೆ ನೀಡಲು ನಿಮ್ಮ ಸಾಮರ್ಥ್ಯವನ್ನು ಬಳಸುವುದು ಒಳಿತು.