ಹೈದರಾಬಾದ್: ಎಲ್ಲೆಲ್ಲೂ ಇಂದು ವಿಶ್ವ ಪರಿಸರ ದಿನದ ಸಂಭ್ರಮ. ಪರಿಸರ ಸಂರಕ್ಷಣೆ ನಮ್ಮ ಆದ್ಯತೆ ಎಂಬ ನೆಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಮಾನವ ಪರಿಸರದ ಶಿಶು, ಪರಿಸರವಿಲ್ಲದೆ ಮಾನವನ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಆದ್ದರಿಂದಲೇ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ.
ವಿಶ್ವ ಪರಿಸರ ದಿನ ಹುಟ್ಟಿಕೊಂಡ ರೀತಿ!
1972 ರಲ್ಲಿ ವಿಶ್ವಸಂಸ್ಥೆ ಮಹಾಸಭೆಯಲ್ಲಿ ಘೋಷಣೆ ಮಾಡಿದ ಬಳಿಕ, 1973 ಜೂನ್ 5 ರಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮ. ಪ್ರತಿ ವರ್ಷ ನಿರ್ದಿಷ್ಟ ವಿಷಯವನ್ನಾಧರಿಸಿ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಅಂತಯೇ 'ಜೀವ ವೈವಿಧ್ಯತೆ ಸಂಭ್ರಮವನ್ನ ಆಚರಿಸಿ' ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ.
ದೇಶಾದ್ಯಂತ ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚುತ್ತಿದೆ. ಕಣ್ಣೆತ್ತಿ ನೋಡಿದರೆ ಪರ್ವತದಂತೆ ಎದ್ದು ನಿಂತ, ನಿಲ್ಲುತ್ತಿರುವ ಕಟ್ಟಡಗಳ ಸಮುಚ್ಛಯ, ರಸ್ತೆಯಲ್ಲಿ ತುಂಬಿದ ತ್ಯಾಜ್ಯ, ಗಾಳಿಯಲ್ಲಿ ಮಾಲಿನ್ಯದ ದಟ್ಟ ಹೊಗೆ, ಚರಂಡಿಗಳ ಅವ್ಯವಸ್ಥೆಯಿಂದ ಕೊಳಚೆ ನೀರಿನ ಪ್ರವಾಹ, ವಾಹನಗಳ ಭರಾಟೆ, ಕಲುಷಿತಗೊಂಡ ನೀರು, ಗಾಳಿ, ಆಹಾರದ ಸೇವನೆಗೆ ನಮ್ಮನ್ನೇ ನಾವು ಒಗ್ಗೂಡಿಸಿಕೊಂಡು ನಡೆಯುತ್ತಿರುವ ಸ್ಥಿತಿ ನಿರ್ಮಾಣಗೊಂಡಿದೆ.
ಕಾಂಕ್ರೀಟ್ ನಾಡಲ್ಲಿ ಹಸಿರು ಉಳಿಯುವುದೇ!?
ಆಧುನಿಕ ಜಗತ್ತಿನಲ್ಲಿ ವ್ಯಕ್ತಿಗಲ್ಲಿ ಪರಿಸರದ ಅಗತ್ಯತೆ, ಕಾಳಜಿ, ಅರಿವು ಕಡಿಮೆಯಾಗಿದ್ದು, ಕಾಳಜಿ ಈಗ ಬಾಯಲ್ಲಿ ಮಾತ್ರ ಪಠಣ ಮಾಡಲು ಶುರು ಮಾಡಿದ್ದಾರೆ. ಆಧುನಿಕತೆ, ನಗರೀಕರಣ, ಕೈಗಾರೀಕರಣ , ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ ಎಂಬ ಹತ್ತು ಹಲವು ಕಾರಣಗಳಿಂದ ಇಂದು ಪರಿಸರಕ್ಕೆ ತೀವ್ರ ಧಕ್ಕೆಯುಂಟಾಗುತ್ತಿದೆ.
ಕೊರೊನಾ ಲಾಕ್ಡೌನ್: ಪರಿಸರ ಮಾಲಿನ್ಯಕ್ಕೆ ಬ್ರೇಕ್!
ಪ್ರಪಂಚದಾದ್ಯಂತ ಕೊರೊನಾ ಲಾಕ್ಡೌನ್ ಹೇರಿಕೆಯಾಗಿರುವ ಕಾರಣ ಪರಿಸರ ಮಾಲಿನ್ಯಕ್ಕೆ ಬ್ರೇಕ್ ಬಿದ್ದಿದೆ. ಹೀಗಾಗಿ ಪ್ರಕೃತಿ ಸ್ವಚ್ಛವಾಗಿದೆ. ವಾಯು ಗುಣಮಟ್ಟದಲ್ಲೂ ಉತ್ತಮ ಸ್ಥಿತಿ ಕಂಡು ಬಂದಿದೆ. ವಾಯುಮಾಲಿನ್ಯದಿಂದ ತುಂಬಿ ಹೋಗಿದ್ದ ದೆಹಲಿ, ಬೆಂಗಳೂರು ಹಾಗೂ ಮುಂಬೈ ನಗರಗಳಲ್ಲಿ ಇದೀಗ ಯಾರೂ ನಿರೀಕ್ಷಿಸದ ಮಟ್ಟಕ್ಕೆ ಮಾಲಿನ್ಯ ಕಡಿಮೆಯಾಗಿದೆ.