ಪ್ರತಿವರ್ಷ ಅಕ್ಟೋಬರ್ 31 ರಂದು ವಿಶ್ವ ನಗರಗಳ ದಿನವನ್ನಾಗಿ ಆಚರಿಸಲಾಗುತ್ತದೆ ಎಂಬುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಇಂಥದೊಂದು ದಿನವನ್ನು ಸಹ ಜಗತ್ತಿನಲ್ಲಿ ಆಚರಿಸುವುದು ಸತ್ಯ. ವಿಶ್ವ ನಗರಗಳ ದಿನ ಯಾಕೆ ಆಚರಿಸಲಾಗುತ್ತದೆ ಹಾಗೂ ಇದರ ಮಹತ್ವಗಳೇನು ಎಂಬ ಬಗೆಗಿನ ವಿಷಯಗಳು ಸಾಕಷ್ಟು ಕುತೂಹಲಕರವಾಗಿವೆ.
2013 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಗೊತ್ತುವಳಿಯ ಪ್ರಕಾರ ವಿಶ್ವ ನಗರಗಳ ದಿನಾಚರಣೆ ಜಾರಿಗೆ ಬಂದಿತು. ಸಮಗ್ರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸಲು ನಗರಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಎಷ್ಟು ಅಗತ್ಯವಾಗಿದೆ ಎಂಬುದನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಈ ವರ್ಷದ ಘೋಷವಾಕ್ಯ
“ಸಮುದಾಯ ಮತ್ತು ನಗರಗಳತ್ತ ನಮ್ಮ ಚಿತ್ತ” ಎಂಬುದು 2020ರ ವಿಶ್ವ ನಗರ ದಿನಾಚರಣೆಯ ಘೋಷವಾಕ್ಯವಾಗಿದೆ. ಈ ಬಾರಿಯ ವಿಶ್ವ ನಗರ ದಿನದ ಜಾಗತಿಕ ಮಟ್ಟದ ಸಮಾರಂಭವು ಕೀನ್ಯಾ ದೇಶದ ನಾಕುರು ನಗರದಲ್ಲಿ ನಡೆಯಲಿದೆ. ಆದರೆ ಕೊರೊನಾ ಬಿಕ್ಕಟ್ಟಿನ ಕಾರಣದಿಂದಾಗಿ ಈ ಸಮಾರಂಭವು ವರ್ಚುವಲ್ ಮೋಡ್ನಲ್ಲಿ ಮಾತ್ರ ನಡೆಯಲಿದೆ.
ಜಾಗತಿಕ ನಗರೀಕರಣದತ್ತ ಒಂದು ಪಕ್ಷಿನೋಟ
ವಿಶ್ವ ನಗರಗಳ ಸಮೀಕ್ಷಾ ವರದಿ-2020ರ ಪ್ರಕಾರ ಜಗತ್ತಿನ ಶೇ 55 ರಷ್ಟು ಜನಸಂಖ್ಯೆಯು ನಗರಗಳಲ್ಲಿ ವಾಸಿಸುತ್ತಿದ್ದು, ಇವರು ವಿಶ್ವದ ಒಟ್ಟು ಶೇ 80ರಷ್ಟು ಆರ್ಥಿಕ ಆದಾಯದ ಕೊಡುಗೆ ನೀಡುತ್ತಾರೆ. ಎಲ್ಲರಿಗೂ ಸುಸ್ಥಿರ ಆರ್ಥಿಕ ಬೆಳವಣಿಗೆ ಹಾಗೂ ಎಲ್ಲರ ಜೀವನ ಮಟ್ಟವನ್ನು ಸುಧಾರಿಸುವ ಶಕ್ತಿ ದೊಡ್ಡ ನಗರಗಳಿಗಿದೆ.
2007 ರವರೆಗೂ ನಗರಗಳಿಗಿಂತ ಹೆಚ್ಚು ಜನ ಹಳ್ಳಿಗಳಲ್ಲಿಯೇ ವಾಸವಾಗಿದ್ದರು. ವಿಶ್ವಸಂಸ್ಥೆಯ ವರದಿಯ ಪ್ರಕಾರ ಈಗ ಶೇ 55 ರಷ್ಟು ಜನ ನಗರಗಳಲ್ಲಿ ವಾಸಿಸುತ್ತಿದ್ದಾರೆ.
2050 ರ ಹೊತ್ತಿಗೆ ವಿಶ್ವದ ಶೇ 68ರಷ್ಟು ಜನ ನಗರಗಳಲ್ಲಿಯೇ ವಾಸಿಸುವ ಸಾಧ್ಯತೆಯಿದೆ ಹಾಗೂ ಬಹುತೇಕ ಇದರಲ್ಲಿನ ಹೆಚ್ಚಿನ ಬೆಳವಣಿಗೆ ಆಫ್ರಿಕಾ ಹಾಗೂ ಏಷ್ಯಾ ದೇಶಗಳಲ್ಲಿ ಕಂಡುಬರಲಿದೆ.
2035 ರ ಹೊತ್ತಿಗೆ ಜಕಾರ್ತಾ ನಗರವು ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ನಗರವಾಗಲಿದ್ದು, ಸದ್ಯ ಈ ಸ್ಥಾನದಲ್ಲಿರುವ ಟೋಕಿಯೊವನ್ನು ಹಿಂದಿಕ್ಕಲಿದೆ.
ಜಕರ್ತಾ, ಟೋಕಿಯೊಗಳ ನಂತರದ ಸ್ಥಾನದಲ್ಲಿ ಚಾಂಗ್ಕಿಂಗ್, ಢಾಕಾ ಹಾಗೂ ಶಾಂಘೈ ನಗರಗಳು ಇರಲಿವೆ.
ಇಷ್ಟೆಲ್ಲ ಅಭಿವೃದ್ಧಿಗಳಾಗುತ್ತಿದ್ದರೂ ನಗರಗಳು ವಿಶ್ವದ ಒಟ್ಟಾರೆ ಭೂಪ್ರದೇಶದ ಶೇ 1 ರಷ್ಟು ನೆಲವನ್ನು ಮಾತ್ರ ಆಕ್ರಮಿಸಿಕೊಂಡಿವೆ.
ವಿಶ್ವದ ನಗರಗಳ ಮೇಲೆ ಕೊರೊನಾ ವೈರಸ್ ದುಷ್ಪರಿಣಾಮ
ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಸ್ಥಳೀಯ ಹಾಗೂ ಜಾಗತಿಕ ಆರ್ಥಿಕ ವ್ಯವಸ್ಥೆಗಳು ಸಂಪೂರ್ಣ ಕುಸಿದು ಬಿದ್ದಿದ್ದು, ಕುಟುಂಬ ವ್ಯವಸ್ಥೆ ಹಾಗೂ ಬಡವರ ಜೀವನಗಳು ಚದುರಿ ಹೋಗಿವೆ.
ನಗರಗಳ ಉತ್ತಮ ಭವಿಷ್ಯದತ್ತ ಪ್ರಯತ್ನಿಸುವತ್ತ ಇಂದಿನ ವಿಶ್ವ ನಗರಗಳ ದಿನಾಚರಣೆ ನಮಗೆಲ್ಲ ಪ್ರೇರಣೆಯಾಗಬೇಕಿದೆ. ಕಳೆದ 12 ತಿಂಗಳುಗಳಲ್ಲಿ ನಗರವಾಸಿಗಳ ಜೀವನದಲ್ಲಿ ನಾಟಕೀಯ ಬದಲಾವಣೆಗಳು ಕಂಡುಬಂದಿವೆ. ಕೊರೊನಾ ವೈರಸ್ನಿಂದ ಎದುರಾಗಿರುವ ಆರೋಗ್ಯ ಸಮಸ್ಯೆ ಹಾಗೂ ಅದರೊಂದಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಏರಿಳಿತಗಳಿಂದ ಜಾಗತಿಕವಾಗಿ ಈ ಹಿಂದೆಂದೂ ಇಲ್ಲದಷ್ಟು ಭಾರಿ ದುಷ್ಪರಿಣಾಮ ಬೀರಿದೆ.
ನಗರಗಳಿಗೆ ಹೊಸ ಪಾಠ ಕಲಿಸಿದ ಕೋವಿಡ್ ಬಿಕ್ಕಟ್ಟು
ಕೋವಿಡ್-19 ಬಿಕ್ಕಟ್ಟಿನಿಂದ ವಿಶ್ವದ ನಗರಗಳು ಹೊಸ ಪಾಠಗಳನ್ನು ಕಲಿಯುವಂತಾಗಿದೆ. ಕೋವಿಡ್ನಂಥ ಬಿಕ್ಕಟ್ಟು ದಿಢೀರನೆ ಎದುರಾದಾಗ ಸ್ಥಳೀಯವಾಗಿ ಅದನ್ನು ಸಮರ್ಥವಾಗಿ ನಿಭಾಯಿಸುವುದು ಮತ್ತು ಹೊಸ ವ್ಯವಸ್ಥೆಗಳನ್ನು ತಕ್ಷಣ ಅಳವಡಿಸಿಕೊಂಡು ಪರಿಸ್ಥಿತಿಯನ್ನು ಎದುರಿಸುವುದು ಇವುಗಳಲ್ಲಿ ಪ್ರಮುಖವಾಗಿದೆ.
ಸಮುದಾಯಗಳ ಸಹಭಾಗಿತ್ವದಲ್ಲಿ ಹೆಚ್ಚಿನ ಸಂಖ್ಯೆಯ ಕ್ವಾರಂಟೈನ್ ವ್ಯವಸ್ಥೆ ಮಾಡಿಕೊಂಡಿರುವ ನಗರಗಳು ಈ ಬಿಕ್ಕಟ್ಟಿನಿಂದ ಬಹು ಬೇಗನೆ ಪಾರಾಗಬಹುದಾಗಿದೆ.
ಒಟ್ಟಾರೆಯಾಗಿ ವಿಶ್ವದ ಸುಸ್ಥಿರ ಆರ್ಥಿಕ ಬೆಳವಣಿಗೆಯಲ್ಲಿ ನಗರಗಳ ಪಾತ್ರ ಬಹು ಮುಖ್ಯವಾಗಿದೆ. ಈ ವಿಷಯವು ಈಗಿನ ಕೊರೊನಾ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ವಿಶ್ವ ನಗರಗಳ ದಿನಾಚರಣೆಯಂದು ಸುಸ್ಥಿರ ಹಾಗೂ ಆರೋಗ್ಯಕರ ನಗರಗಳ ಬೆಳವಣಿಗೆಗೆ ನಾವೆಲ್ಲ ಪಣ ತೊಡೋಣ.