ನವದೆಹಲಿ: ಸಂಬಳದ ವಿಚಾರದಲ್ಲಿ ಮಾಲೀಕ ಮತ್ತು ಕೆಲಸಗಾರನ ನಡುವೆ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯ ಕಂಡಿದೆ.
ಉತ್ತರಪ್ರದೇಶದ ತಸ್ಲಿಮ್ (21) ಮಾಲೀಕ ಓಂಪ್ರಕಾಶ್ರ (45) ಡೈರಿಯಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ ಓಂಪ್ರಕಾಶ್ಗೆ ಕೊರೊನಾದಿಂದಾಗಿ ವ್ಯಾಪಾರದಲ್ಲಿ ನಷ್ಟ ಸಂಭವಿಸಿತ್ತು. ಹೀಗಾಗಿ ತಸ್ಲಿಮ್ಗೆ ಈ ಬಾರಿ ಸಂಬಳ ಕಡಿಮೆ ಕೊಡಲು ನಿರ್ಧರಿಸಿದ್ದರು. ಆದ್ರೆ ತಸ್ಲಿಮ್ ಇದಕ್ಕೆ ಒಪ್ಪಲಿಲ್ಲ. ಈ ವಿಚಾರವಾಗಿ ಇವರ ಮಧ್ಯೆ ಜಗಳವಾಗಿದೆ. ಈ ವೇಳೆ ಓಂಪ್ರಕಾಶ್ ತಸ್ಲಿಮ್ ಮೇಲೆ ಕೈ ಮಾಡಿದ್ದಾನೆ.
ಇದರಿಂದಾಗಿ ಯಜಮಾನನ ಮೇಲೆ ತಸ್ಲಿಮ್ ಕೋಪ ಬೆಳಸಿಕೊಂಡಿದ್ದ. ಜಗಳವಾದ ರಾತ್ರಿಯಂದು ನಿದ್ರಿಸುತ್ತಿದ್ದ ಓಂಪ್ರಕಾಶ್ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಕತ್ತು ಕೊಯ್ದು ಕೊಲೆ ಮಾಡಿ ಪಕ್ಕದಲ್ಲಿರುವ ಬಾವಿಗೆ ಎಸೆದು ಅಲ್ಲಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.
ಎರಡು ದಿನದಿಂದ ನಮ್ಮ ಮಾವ ಕಾಣುತ್ತಿಲ್ಲವೆಂದು ಸೋದರಳಿಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸರು ಡೈರಿ ಫಾರಂ ಬಳಿ ಪರಿಶೀಲಿಸುತ್ತಿರುವಾಗ ಪಕ್ಕದ ಬಾವಿಯಿಂದ ದುರ್ವಾಸನೆ ಬಂದಿದೆ. ಬಾವಿ ಬಳಿ ನೋಡಿದಾಗ ಓಂಪ್ರಕಾಶ್ ಮೃತದೇಹ ಪತ್ತೆಯಾಗಿದೆ.
ಇನ್ನು ತನಿಖೆ ಕೈಗೊಂಡ ಪೊಲೀಸರಿಗೆ ಮೃತ ಓಂಪ್ರಕಾಶ್ ಬೈಕ್ ಮತ್ತು ಫೋನ್ಅನ್ನು ತಸ್ಲಿಮ್ ಕದ್ದಿರುವುದು ಬೆಳಕಿಗೆ ಬಂದಿದೆ. ಬಳಿಕ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.