ಸಿಲ್ಚಾರ್ (ಅಸ್ಸೋಂ): ದಕ್ಷಿಣ ಅಸ್ಸೋಂನ ಹೈಲಕಂಡಿ ಜಿಲ್ಲೆಯ ಕ್ವಾರಂಟೈನ್ನಲ್ಲಿದ್ದ 32 ವರ್ಷದ ಮಹಿಳೆ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಟುಂಬದೊಂದಿಗೆ ಬೆಂಗಳೂರಿನಿಂದ ತಮ್ಮ ಗ್ರಾಮಕ್ಕೆ ವಾಪಸ್ ಬಂದಿದ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೊರೊನಾ ವರದಿ ಬರುವುದು ವಿಳಂಬವಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಈಕೆಯ ಪತಿ ಶಂಕೆ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲೆಯ ವಾಶ್ ರೂಂನ ಕಿಟಕಿಯಲ್ಲಿ ಭಾನುವಾರ ರಾತ್ರಿ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಮಹಿಳೆ, ಪತಿ ಮತ್ತು ಅವರ ಎಂಟು ವರ್ಷದ ಮಗ ಜೂನ್ 28 ರಂದು ವಿಮಾನದ ಮೂಲಕ ಬೆಂಗಳೂರಿನಿಂದ ಹೈಲಕಂಡಿಗೆ ಮರಳಿದ್ದರು. ಆರೋಗ್ಯ ಅಧಿಕಾರಿಗಳು, ಪೊಲೀಸರು ಅವರು ಹಿಂದಿರುಗಿದ ನಂತರ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಿ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಿದ್ದರು. ಕುಟುಂಬದ ಎಲ್ಲರನ್ನು ಕ್ವಾರಂಟೈನ್ಗೆ ಒಳಪಡಿಸಿದ್ದರು.
ಗಂಡ ಮತ್ತು ಮಗನ ವರದಿ ನೆಗೆಟಿವ್ ಬಂದಿದ್ದು, ತಾಂತ್ರಿಕ ಕಾರಣಗಳಿಂದ ಮಹಿಳೆಯ ಪರೀಕ್ಷಾ ವರದಿಯನ್ನು ತಡೆ ಹಿಡಿಯಲಾಗಿತ್ತು.
ಆರೋಗ್ಯ ಅಧಿಕಾರಿಗಳು ಆತ್ಮಹತ್ಯೆಯ ನಂತರ ಮಹಿಳೆ ಸ್ವ್ಯಾಬ್ ಟೆಸ್ಟ್ ಮಾಡಿದ್ದು, ವರದಿ ನೆಗೆಟಿವ್ ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗಾಗಿ ಮಹಿಳೆಯ ಸ್ವ್ಯಾಬ್ ಮಾದರಿಯನ್ನು ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ.