ಹೈದರಾಬಾದ್: ಕೋವಿಡ್-19 ಭೀತಿಯಿಂದ ವಿಧಿಸಲಾಗಿರುವ ಲಾಕ್ಡೌನ್ ದೇಶದ ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸಿದೆ. ಸಾರಿಗೆ ಸಂಚಾರ ಹಾಗೂ ಇನ್ನಿತರ ಚಟುವಟಿಕೆಗಳ ಮೇಲೆ ವಿಧಿಸಲಾಗಿರುವ ನಿರ್ಬಂಧಗಳಿಂದ ಮುಂಗಾರು ಬಿತ್ತನೆಗೆ ಬೇಕಾದ ಬೀಜಗಳ ಸಂಸ್ಕರಣೆ ಹಾಗೂ ಅವುಗಳ ಪ್ಯಾಕಿಂಗ್ ಉದ್ಯಮ ಸಮಸ್ಯೆಗಳ ಸುಳಿಗೆ ಸಿಲುಕಿದೆ.
ಬೀಜೋತ್ಪಾದನಾ ಕಂಪನಿಗಳು ಈ ಕೂಡಲೇ ಕಾರ್ಯಾರಂಭವಾಗದಿದ್ದಲ್ಲಿ ಬರುವ ತಿಂಗಳಿನಿಂದ ದೇಶಾದ್ಯಂತ ಬೀಜ ವಿತರಣೆ ಮಾಡುವುದು ಕಷ್ಟಕರವಾಗಲಿದೆ ಎಂದು ರಾಷ್ಟ್ರೀಯ ಬೀಜ ನಿಗಮವು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ತಿಳಿಸಿದೆ. ಅಕ್ಟೋಬರ್ನಲ್ಲಿ ಬಿತ್ತನೆ ಮಾಡಲಾದ ಬೀಜೋತ್ಪಾದನಾ ಬೆಳೆ ಈಗ ಕಟಾವಿನ ಹಂತದಲ್ಲಿದೆ. ಕಟಾವಿನ ನಂತರ ಬೀಜಗಳನ್ನು ಬೀಜ ಸಂಸ್ಕರಣಾ ಕೇಂದ್ರಗಳಿಗೆ ಕಳುಹಿಸಿ, ಪರೀಕ್ಷೆ ಮಾಡಿದ ನಂತರವಷ್ಟೇ ಮುಂಗಾರು ಹಂಗಾಮಿನ ವೇಳೆಗೆ ಬೀಜ ಮಾರಾಟ ಸಾಧ್ಯವಾಗಲಿದೆ ಎಂದು ಬೀಜ ನಿಗಮ ಹೇಳಿದೆ.
ತೆಲಂಗಾಣ ಕೃಷಿ ಇಲಾಖೆಯು 7.50 ಲಕ್ಷ ಕ್ವಿಂಟಲ್ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ನೇರವಾಗಿ ಮಾರಾಟ ಮಾಡಲು ನಿರ್ಧರಿಸಿದೆ. ಕೃಷಿ ಬೀಜ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿದ್ದರಿಂದ ಇವುಗಳ ಸಾಗಾಟಕ್ಕೆ ಯಾವುದೇ ತೊಂದರೆ ತೊಂದರೆ ಆಗದು ಎನ್ನಲಾಗಿದೆ.
ಕೃಷಿ ಬೀಜಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಬೀಜ ನಿಗಮದ ಅಧ್ಯಕ್ಷ ಎಂ. ಪ್ರಭಾಕರ ರಾವ್, ಕೇಂದ್ರದ ಕೃಷಿ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯದ ಕೃಷಿ ಸಚಿವರಿಗೆ ಪತ್ರ ಬರೆದಿದ್ದು, ಲಾಕ್ಡೌನ್ ಇರುವಾಗ ಬೀಜಗಳ ಸಾಗಣೆಗೆ ಅನುಮತಿ ನೀಡುವಂತೆ ಕೋರಿದ್ದಾರೆ.
ಪಂಜಾಬ್ನಲ್ಲಿ ಮೇ ತಿಂಗಳಿನಿಂದ ಹತ್ತಿ ಕೃಷಿಯ ಹಂಗಾಮು ಆರಂಭವಾಗುತ್ತದೆ. ಹಾಗೆಯೇ ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲೂ ಮೇ ತಿಂಗಳಿನಿಂದ ಕೃಷಿ ಬೀಜಗಳ ಮಾರಾಟ ಆರಂಭಿಸುವುದು ಅಗತ್ಯವಾಗಿದೆ. ಹೀಗಾಗಿ ಕೃಷಿ ಬೀಜ ಸಂಸ್ಕರಣಾ ಕಂಪನಿಗಳನ್ನು ಲಾಕ್ಡೌನ್ ನಿಯಮದಿಂದ ಹೊರಗಿಡಬೇಕೆಂದು ಆಗ್ರಹಿಸಲಾಗಿದೆ.