ನವದೆಹಲಿ: ಲಾ ನಿನಾ ಪರಿಸ್ಥಿತಿಗಳಿಂದಾಗಿ ಈ ಋತುವಿನಲ್ಲಿ ಚಳಿಗಾಲವು ತೀವ್ರವಾಗಿರಬಹುದು ಎಂದು ಭಾರತ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತುಂಜಯ ಮೊಹಾಪಾತ್ರ ಹೇಳಿದ್ದಾರೆ.
"ಹವಾಮಾನ ಬದಲಾವಣೆಯು ತಾಪಮಾನದಲ್ಲಿ ಏರಿಕೆಗೆ ಕಾರಣವಾಗುತ್ತದೆ ಎಂಬ ಅಭಿಪ್ರಾಯ ಇರಬಾರದು. ಇದಕ್ಕೆ ವಿರುದ್ಧವಾಗಿ, ಅನಿಯಮಿತ ಹವಾಮಾನಕ್ಕೂ ಕಾರಣವಾಗುತ್ತದೆ" ಎಂದು ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಆಯೋಜಿಸಿದ್ದ 'ಕೋಲ್ಡ್ ವೇವ್ ರಿಸ್ಕ್ ರಿಡಕ್ಷನ್' ಕುರಿತು ವೆಬಿ ನಾರ್‌ನಲ್ಲಿ ಮಾತನಾಡಿದ ಅವರು, "ದುರ್ಬಲ ಲಾ ನಿನಾ ಸ್ಥಿತಿ ಚಾಲ್ತಿಯಲ್ಲಿರುವುದರಿಂದ, ನಾವು ಈ ವರ್ಷ ಹೆಚ್ಚು ಶೀತ ವಾತಾವರಣ ನಿರೀಕ್ಷಿಸಬಹುದು. ಶೀತಲ ಅಲೆಗಳ ಅಂಶವನ್ನು ನೀವು ಪರಿಗಣಿಸಿದರೆ ಎಲ್ ನಿನೊ ಮತ್ತು ಲಾ ನಿನಾ ಪರಿಸ್ಥಿತಿಗಳು ಪ್ರಮುಖ ಪಾತ್ರವಹಿಸುತ್ತವೆ" ಎಂದು ಹೇಳಿದ್ದಾರೆ.
"ಲಾ ನಿನಾ ಪರಿಸ್ಥಿತಿಗಳು ಶೀತ ಅಲೆಗಳ ಪರಿಸ್ಥಿತಿಗಳಿಗೆ ಅನುಕೂಲಕರವಾಗಿರುತ್ತವೆ. ಆದರೆ ಎಲ್ ನಿನೊ ಪರಿಸ್ಥಿತಿಗಳು ಅದಕ್ಕೆ ಪ್ರತಿಕೂಲವಾಗಿವೆ. ಶೀತ ಗಾಳಿಯಿಂದ ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸಾವುಗಳು ಸಂಭವಿಸಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಪ್ರತಿವರ್ಷ ನವೆಂಬರ್‌ನಲ್ಲಿ ಚಳಿಗಾಲದ ಮುನ್ಸೂಚನೆಯನ್ನು ಬಿಡುಗಡೆ ಮಾಡುತ್ತದೆ. ಇದು ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಚಳಿಗಾಲದ ತೀವ್ರತೆಯ ಬಗ್ಗೆ ಮುನ್ಸೂಚನೆಗಳನ್ನು ನೀಡುತ್ತದೆ. ಲಾ ನಿನಾ ಪೆಸಿಫಿಕ್ ಸಮುದ್ರದ ನೀರಿನ ತಂಪಾಗಿಸುವಿಕೆಗೆ ಸಂಬಂಧಿಸಿದೆ. ಆದರೆ ಎಲ್ ನಿನೊ ಅದರ ತಾಪಮಾನಕ್ಕೆ ಸಂಬಂಧಿಸಿದೆ. ಎರಡೂ ಅಂಶಗಳು ಭಾರತೀಯ ಮಾನ್ಸೂನ್ ಮೇಲೆ ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ.