ನವದೆಹಲಿ: ಇರಾನ್ನ ಸೇನಾನಾಯಕ ಸುಲೇಮಾನಿ ಹತ್ಯೆ ಬಳಿಕ ಅಮೆರಿಕ-ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧ ತೀರಾ ಹದಗೆಟ್ಟಿದ್ದು, ಶಾಂತಿ ಸ್ಥಾಪನೆಗೆ ಭಾರತ ಮುಂದಾದರೆ ಸ್ವಾಗತಿಸುತ್ತೇವೆ ಎಂದು ಭಾರತದಲ್ಲಿರುವ ಇರಾನ್ ರಾಯಭಾರಿ ಅಲಿ.ಚೆಗೆನಿ ಹೇಳಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವಿನ ಹಗೆತನ ಮುಂದುವರೆಯುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಇರಾನ್ ರಾಯಬಾರಿ, ಭಾರತವು ಸಾಮಾನ್ಯವಾಗಿ ಜಗತ್ತಿನಲ್ಲಿ ಶಾಂತಿ ಕಾಪಾಡುವಲ್ಲಿ ಉತ್ತಮ ಪಾತ್ರವಹಿಸುತ್ತದೆ. ಇರಾನ್ನಲ್ಲಿ ಪರಿಸ್ಥಿತಿ ವಿಷಮಗೊಳ್ಳದಂತೆ ಜಗತ್ತಿನ ಎಲ್ಲಾ ದೇಶಗಳು, ವಿಶೇಷವಾಗಿ ಭಾರತ ಕೈಗೊಳ್ಳುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾವು ಯುದ್ಧವನ್ನು ಬಯಸುವುದಿಲ್ಲ. ಶಾಂತಿ, ಸಮೃದ್ಧಿಯನ್ನು ಹುಡುಕುತ್ತಿದ್ದೇವೆ. ಈ ಜಗತ್ತಿನಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಸಹಾಯ ಮಾಡುವ ಭಾರತದ ಯಾವುದೇ ಯೋಜನೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.