ನವದೆಹಲಿ: 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) (-) ಶೇ. 23.9ಕ್ಕೆ ಇಳಿದ ಬೆನ್ನಲ್ಲೇ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ವರ್ಚುವಲ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, "ಆರ್ಥಿಕತೆಯಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಕಾಣಲು ಇನ್ನೂ ಹಲವು ತಿಂಗಳು ಬೇಕಾಗುತ್ತದೆ. ಸರ್ಕಾರದ ನಿಷ್ಕ್ರಿಯತೆ ಮತ್ತು ಅಸಮರ್ಥತೆಯಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ" ಎಂದು ಹೇಳಿದರು.
ಜೂನ್ 2020-21ರಂದು ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ (ಕ್ಯೂ 1) ದೇಶದ ಜಿಡಿಪಿ (-) ಶೇಕಡಾ 23.9ಕ್ಕೆ ಇಳಿದಿದೆ. ಕೇಂದ್ರದ ಅಂಕಿ-ಅಂಶ ಕಚೇರಿಯಿಂದ ಮಾಹಿತಿ ಬಂದ ಬಳಿಕ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಈ ಹೇಳಿಕೆ ನೀಡಿದ್ದಾರೆ.
"ಇವೆಲ್ಲವನ್ನೂ ನಿರೀಕ್ಷಿಸಲಾಗಿತ್ತು, ನಾವು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೆವು. ಆರ್ಥಿಕ ಬಿಕ್ಕಟ್ಟನ್ನು ತಡೆಗಟ್ಟುವ ಮತ್ತು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಈ ಹಿಂದೆಯೇ ಸರ್ಕಾರವನ್ನು ಒತ್ತಾಯಿಸಿದ್ದೆವು" ಎಂದು ಚಿದಂಬರಂ ಹೇಳಿದ್ದಾರೆ.