ಇಂದೋರ್( ಮಧ್ಯಪ್ರದೇಶ): ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಕನಿಷ್ಠ ಆದಾಯ ಭದ್ರತೆ ಯೋಜನೆ ಜಾರಿ ಮಾಡುವುದಾಗಿ ರಾಹುಲ್ ಗಾಂಧಿ ಘೋಷಿಸಿರುವುದು ಸಾಕಷ್ಟು ಸುದ್ದಿಯಲ್ಲಿದೆ. ಈ ಮಧ್ಯೆ ಯೋಜನೆ ಕುರಿತು ಸ್ವಾರಸ್ಯಕರ ಘಟನೆಯೊಂದು ಇಂದೋರ್ನಲ್ಲಿ ನಡೆದಿದೆ.
ಇಂದೋರ್ನ ವ್ಯಕ್ತಿವೋರ್ವ ತನ್ನ ವಿಚ್ಛೇದಿತ ಪತ್ನಿ ಹಾಗೂ ಮಗಳಿಗೆ ಇದೇ ಯೋಜನೆಯಿಂದ ಬರುವ ಹಣವನ್ನೇ ನೀಡುತ್ತೇನೆ ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ಹೇಳಿದ್ದಾನೆ. ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, ರಾಹುಲ್ ಜಾರಿಗೆ ತರಲಿರುವ ಈ ಯೋಜನೆಯನ್ನು ವ್ಯಕ್ತಿ ಈಗಲೇ ತನ್ನ ಅನುಕೂಲಕ್ಕೆ ಬಳಸಿಕೊಂಡಿದ್ದಾನೆ.
ಕೌಟುಂಬಿಕ ನ್ಯಾಯಾಲಯವು ಆನಂದ ಶರ್ಮಾ ಎಂಬಾತನಿಗೆ 3000 ರೂ.ಯನ್ನು ವಿಚ್ಛೇದಿತ ಪತ್ನಿಗೆ ಹಾಗೂ 1500 ರೂ. ಮಗಳ ಜೀವನ ನಿರ್ವಹಣೆಗಾಗಿ ನೀಡಬೇಕೆಂದು ಆದೇಶಿಸಿದೆ. ಆದರೆ ಕೋರ್ಟ್ಗೆ ಪತ್ರ ಬರೆದಿರುವ ಶರ್ಮಾ, ತಾನು ನಿರುದ್ಯೋಗಿ, ಇಷ್ಟು ಹಣ ನೀಡಲು ಸಾಧ್ಯವಾಗದು ಎಂದು ಹೇಳಿದ್ದಾನೆ. ಇದರ ಜತೆಗೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ತನ್ನ ಘೋಷಣೆಯಂತೆ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 6000 ಕನಿಷ್ಠ ಆದಾಯ ಜಾರಿ ಮಾಡಿದಾಗ ಖಂಡಿತ ಹಣ ನೀಡುತ್ತೇನೆ ಎಂದೂ ಹೇಳಿದ್ದಾನೆ.
ಮುಂದುವರೆದು, ಸರ್ಕಾರ ನೀಡಲಿರುವ ಹಣವನ್ನು ಪತ್ನಿ ಹಾಗೂ ಮಗಳ ಖಾತೆಗೆ ನೇರವಾಗಿ ಸಂದಾಯ ಮಾಡುತ್ತೇನೆ ಎಂದಿದ್ದಾನೆ. ಶರ್ಮಾ ಅರ್ಜಿಗೆ ಕೋರ್ಟ್ ಸಮ್ಮತಿಸಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 29ರಂದು ನಡೆಸಲಿದೆ.
ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲೆಸಿದರು ಎಂಬ ಮಾತಿನಂತೆ, ಕಾಂಗ್ರೆಸ್ ಭರವಸೆಯಾಗಿ ನೀಡಿದ ಮಾತನ್ನೇ ವ್ಯಕ್ತಿ ತನ್ನ ಕಾರ್ಯಸಾಧನೆಗೆ ಬಳಸಿಕೊಂಡಿದ್ದಾನೆ.