ನವದೆಹಲಿ: ಒಲಿಂಪಿಕ್ನಲ್ಲಿ ಚಿನ್ನದ ಪದಕ ಗೆಲ್ಲುವ ತನಕ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಆರು ಬಾರಿ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಆಗಿದ್ದ ಮೇರಿಕೋಮ್ ಭರವಸೆ ವ್ಯಕ್ತಪಡಿಸಿದ್ದಾರೆ. 2012ರ ಲಂಡನ್ ಒಲಿಂಪಿಕ್ನ 51 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದ ಮೇರಿ ಕೋಮ್, 2016ರ ರಿಯೋ ಒಲಿಂಪಿಕ್ಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದರು. ಹಿಂದಿನ ವಾರ ಜೋರ್ಡಾನ್ನಲ್ಲಿ ನಡೆದ ಸ್ಪರ್ಧೆಗಳಲ್ಲಿ ಗೆದ್ದು ಟೋಕಿಯೋ ಒಲಿಂಪಿಕ್ಗೆ ಮೇರಿಕೋಮ್ ಆಯ್ಕೆಯಾಗಿದ್ದರು. ಕೊರೊನಾ ಮಹಾಮಾರಿಯ ಕಾರಣಕ್ಕೆ ಈ ಒಲಿಂಪಿಕ್ ಸ್ಪರ್ಧೆಗಳು ಮುಂದೂಡಿಕೆಯಾಗಿವೆ.
ಭಾರತೀಯ ಕ್ರೀಡಾ ಪ್ರಾಧಿಕಾರದ ಫೇಸ್ಬುಕ್ ಲೈವ್ ಸೆಷೆನ್ನಲ್ಲಿ ಮಾತನಾಡಿದ ಮೇರಿ ಕೋಮ್ ''ಈ ಬಾರಿಯ ಒಲಿಂಪಿಕ್ನಲ್ಲಿ ಚಿನ್ನದ ಪದಕ ಗೆಲ್ಲವುದೇ ನನ್ನ ಗುರಿ. ಈ ವಯಸ್ಸಿನಲ್ಲೂ ಕೂಡಾ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ. ಈ ಒಲಿಂಪಿಕ್ಗೆ ಆಯ್ಕೆಯಾಗೋದು ತುಂಬಾ ಕಷ್ಟಕರವಾಗಿತ್ತು'' ಎಂದಿರುವ ಅವರು '' ವಿಶ್ವ ಚಾಂಪಿಯನ್ ಶಿಪ್ ಹಾಗೂ ಒಲಿಂಪಿಕ್ನಲ್ಲಿ ಗೆಲ್ಲಲು ಯಾವುದೇ ಗೆಲುವಿನ ಮಂತ್ರವಿಲ್ಲ. ಚಿನ್ನದ ಪದಕ ಗೆಲ್ಲುವ ತನಕ ಹೋರಾಡುತ್ತೇನೆ'' ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಜೋರ್ಡಾನ್ನ ಅಮ್ಮಾನ್ ನಗರದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಣೆಯಾಗಿತ್ತು. ಆದರೂ ತಮ್ಮ ಪ್ರಯತ್ನ ಮುಂದುವರೆಸುತ್ತಿದ್ದಾರೆ. ಮುಂದಿನ ವರ್ಷ ಆಗಸ್ಟ್ 23ರಂದು ನಡೆಯಲಿರುವ ಟೋಕಿಯೋ ಒಲಿಂಪಿಕ್ನಲ್ಲಿ ಭಾಗವಹಿಸಲಿರುವ ಇವರು ಸದ್ಯಕ್ಕೆ ಕ್ವಾರಂಟೈನ್ನಲ್ಲಿದ್ದು, ಮನೆಯಲ್ಲಿಯೇ ಒಲಿಂಪಿಕ್ಗೆ ಸಿದ್ಧತೆ ನಡೆಸುತ್ತಿದ್ದಾರೆ. ಜೊತೆಗೆ ಕೊರೊನಾ ಮಹಾಮಾರಿಯಿಂದ ಹೋರಾಡಲು ಸರ್ಕಾರದ ನಿಯಮಗಳನ್ನು ಪಾಲಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.