ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಾರ್ಯಚಟುವಟಿಕೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲು ಅನುಮತಿ ನೀಡುವಂತೆ ನಿರ್ದೇಶನ ಕೋರಿ ವಕೀಲರು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸುವುದಾಗಿ ದೆಹಲಿ ಹೈಕೋರ್ಟ್ ತಿಳಿಸಿದೆ.
ಮಾರ್ಚ್ 20 ರವರೆಗೆ ನ್ಯಾಯಾಲಯದ ಕಾರ್ಯ ಚಟುವಟಿಕೆಗಳನ್ನು ನಿರ್ಬಂಧಿಸಲು ನ್ಯಾಯಾಲಯವು ನಿರ್ದೇಶಿಸಿತ್ತು. ಬಳಿಕ ನ್ಯಾಯಪೀಠವು ತುರ್ತು ವಿಚಾರಣೆಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ ಎಂದು ಹೇಳಿತ್ತು. ಹೀಗಾಗಿ ಮಾರ್ಚ್ 17 ರಿಂದ 20 ರವರೆಗಿನ ಪಟ್ಟಿ ಮಾಡಲಾದ ಎಲ್ಲಾ ವಿಚಾರಣೆಗಳನ್ನು ಕೋರ್ಟ್ ಮುಂದೂಡಿದೆ.
ಈ ಎಲ್ಲಾ ದಿನಗಳಲ್ಲಿ ಪಟ್ಟಿ ಮಾಡಿದಂತಹ ವಿಚಾರಣೆಗಳನ್ನು ಜಂಟಿ ನೋಂದಣಿದಾರರು (joint registrars) ನಡೆಸಿಕೊಡುತ್ತಾರೆಂದು ಹೈಕೋರ್ಟ್ ಹೇಳಿದೆ.
ಮಾರ್ಚ್ 31 ರವರೆಗೆ ಯಾವುದೇ ವಿಚಾರಣಾಧೀನ ಕೈದಿಯನ್ನು ಅಧೀನ ನ್ಯಾಯಾಲಯಗಳ ಮುಂದೆ ಹಾಜರುಪಡಿವಂತಿಲ್ಲ. ಅಂತಹ ಯಾರಾದರೂ ವ್ಯಕ್ತಿಯ ವಿಚಾರಣೆ ಅನಿವಾರ್ಯವಾಗಿದ್ದರೆ ಮಾತ್ರ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ಹೈಕೋರ್ಟ್ ನಿರ್ದೇಶಿಸಿದೆ.