ಮಧುರೈ: ಮಹಿಳೆಯೊಬ್ಬಳು ತಾಳಿ ಕಟ್ಟಿದ ಗಂಡನನ್ನೇ ಕೊಲೆ ಮಾಡಿ ಸಿನಿಮೀಯ ರೀತಿಯಲ್ಲಿ ನಾಟಕವಾಡಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಮಧುರೈನ ತಿರುಮಂಗಲಂ ಪ್ರದೇಶದಲ್ಲಿ ವಾಸವಾಗಿದ್ದ ಸುಧೀರ್(34) ಕೊಲೆಯಾಗಿರುವ ವ್ಯಕ್ತಿ. ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದನು. ಕಳೆದ ಆರು ವರ್ಷಗಳ ಹಿಂದೆ ಸೆಲ್ವಿ ಎಂಬ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸದ್ಯ ಅವರಿಗೆ ಮಗುವಿದೆ. ಶುಕ್ರವಾರ ಗಂಡನ ಕೊಲೆ ಮಾಡಿರುವ ಹೆಂಡತಿ ಆತನ ಮೃತದೇಹ ತೆಗೆದುಕೊಂಡು ಆಸ್ಪತ್ರೆಗೆ ತೆರಳಿದ್ದಾಳೆ. ಅಲ್ಲಿ ತನ್ನ ಗಂಡ ಏಕಾಏಕಿಯಾಗಿ ಮೂರ್ಛೆ ಹೋಗಿ ಬಿದ್ದಿದ್ದಾನೆ ಎಂದು ಹೇಳಿದ್ದಾಳೆ.
ಆತನ ಪರೀಕ್ಷೆ ಮಾಡಿದಾಗ ವ್ಯಕ್ತಿ ಸಾವನ್ನಪ್ಪಿರುವುದು ಖಚಿತಗೊಂಡಿದೆ. ಆದರೆ, ಆತನ ಖಾಸಗಿ ಭಾಗದಲ್ಲಿ ಗಂಭೀರವಾದ ಗಾಯವಾಗಿರುವುದು ವೈದ್ಯರಿಗೆ ಗೊತ್ತಾಗಿದೆ. ತಕ್ಷಣವೇ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಲ್ಲಿಗೆ ಬಂದಿರುವ ಪೊಲೀಸರು ಹೆಂಡತಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ. ನಿತ್ಯ ಕುಡಿದು ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾರಣ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾಳೆ. ಪೊಲೀಸರು ಮಹಿಳೆಯನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.