ನವದೆಹಲಿ: ವಾಸ್ತವ ನಿಯಂತ್ರಣ ರೇಖೆಯ ಬಳಿ ಭಾರತ ಹಾಗೂ ಚೀನಾ ಮಧ್ಯೆ ಸಂಘರ್ಷ ಹೆಚ್ಚಾಗುತ್ತಿರುವ ಬೆನ್ನಲ್ಲೇ ಗಾಲ್ವನ್ ವ್ಯಾಲಿಯ ಹೆಸರು ಬಹುವಾಗಿ ಕೇಳಿ ಬರುತ್ತಿದೆ. ಬಹುತೇಕ ಸಂಘರ್ಷಗಳು ಈ ಗಾಲ್ವನ್ ವ್ಯಾಲಿ ಪ್ರದೇಶದಲ್ಲಿಯೇ ನಡೆಯುತ್ತಿರುವುದು ಇದಕ್ಕೆ ಕಾರಣವಾಗಿದೆ. ಆದರೆ ಗಾಲ್ವನ್ ವ್ಯಾಲಿಯ ಹೆಸರಿಗೂ ಹಾಗೂ ಕಾಶ್ಮೀರಕ್ಕೂ ಏನೋ ಒಂದು ಸಂಬಂಧವಿರುವುದು ಎಲ್ಲರಿಗೂ ಕುತೂಹಲ ಮೂಡಿಸಿದೆ.
ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಗಾಲ್ವನ್ ವ್ಯಾಲಿ, ಹಿಮಾಲಯದಿಂದ ಹರಿದು ಬರುವ ನದಿಯ ಸ್ಥಳವಾಗಿದೆ. ಕಾರಾಕೋರಂ ಕಣಿವೆಯಲ್ಲಿ ಹುಟ್ಟುವ ಗಾಲ್ವನ್ ನದಿ 80 ಕಿಮೀ ಪಶ್ಚಿಮಾಭಿಮುಖವಾಗಿ ಹರಿದು ಅಕ್ಸಾಯ್ ಚಿನ್ ಮತ್ತು ಪೂರ್ವ ಲಡಾಖ್ಗಳ ಮೂಲಕ ಶಿಯೋಕ್ ನದಿಯನ್ನು ಸೇರುತ್ತದೆ. ಈ ಸ್ಥಳದಲ್ಲಿಯೇ ಆಗಾಗಾ ಚೀನಾ-ಭಾರತ ಸೈನಿಕರ ಜಟಾಪಟಿ ನಡೆಯುತ್ತಿರುತ್ತದೆ. 1962 ರ ಇಂಡೊ-ಚೀನಾ ಯುದ್ಧದ ಸಮಯದಲ್ಲಿಯೂ ಇದೇ ಪ್ರದೇಶದಲ್ಲಿ ಭೀಕರ ಯುದ್ಧ ನಡೆದಿತ್ತು.
ಗುಲಾಂ ರಸೂಲ್ ಶಾಹ ಅಲಿಯಾಸ್ ಗಾಲ್ವನ್ ಎಂಬುವರ ಹೆಸರನ್ನು ಈ ಪ್ರದೇಶಕ್ಕೆ ಇಡಲಾಗಿದೆ. ಗಾಲ್ವನ್ ಇವರು ಕಾಶ್ಮೀರ ಮೂಲದವರಾಗಿದ್ದರು. ಆದರೆ ಇವರ ಅಜ್ಜ ಕಾರ್ರಾ ಗಾಲ್ವನ್ ಎಂಬುವರು ಡೋಗ್ರಾ ರಾಜರಿಗೆ ಹೆದರಿ ಕಾಶ್ಮೀರದಿಂದ ಬಾಲ್ಟಿಸ್ಟಾನ್ಗೆ ವಲಸೆ ಹೋಗಿದ್ದರಂತೆ.
ಗಾಲ್ವನ್ ವಂಶಜರೊಂದಿಗೆ ಖುದ್ದಾಗಿ ಮಾತನಾಡಿರುವ ಈಟಿವಿ ಭಾರತ್, ಗಾಲ್ವನ್ ಹೆಸರಿನ ಇತಿಹಾಸ ಹಾಗೂ ಅವರ ಹೆಸರನ್ನು ಏಕೆ ಇಡಲಾಯಿತು ಎಂಬುದನ್ನು ತಿಳಿಯಲು ಪ್ರಯತ್ನಿಸಿತು.
ಗುಲಾಂ ರಸೂಲ್ ಗಾಲ್ವನ್ ಅವರ ಮರಿ ಮೊಮ್ಮಗ ಮುಹಮ್ಮದ್ ಅಮೀನ್ ಗಾಲ್ವನ್ ಹೇಳಿದ್ದು ಹೀಗೆ: "ಡೋಗ್ರಾ ಮಹಾರಾಜರ ಆಳ್ವಿಕೆಯ ಕಾಲದಲ್ಲಿ ನಮ್ಮ ಹಿರಿಯರಾದ ಕಾರ್ರಾ ಗಾಲ್ವನ್ ರಕ್ಷಣೆಗಾಗಿ ಬಾಲ್ಟಿಸ್ಟಾನ್ಗೆ ವಲಸೆ ಹೋದರು. ಗುಲಾಂ ರಸೂಲ್ 1878 ರಲ್ಲಿ ಲೇಹ್ನಲ್ಲಿ ಜನಿಸಿದರು. ಅವರಿಗೆ 12 ವರ್ಷ ವಯಸ್ಸಾಗುತ್ತಲೇ ಪ್ರದೇಶಕ್ಕೆ ಬರುತ್ತಿದ್ದ ಬ್ರಿಟಿಷ್ ಪ್ರವಾಸಿಗರು ಹಾಗೂ ಸಾಹಸಿಗರಿಗೆ ಗೈಡ್ ಆಗಿ ದಾರಿ ತೋರಿಸಲಾರಂಭಿಸಿದರು. ಕಾರಾಕೋರಂ ಹಾಗೂ ಮಧ್ಯ ಏಷ್ಯಾದಿಂದ ಲಡಾಖ್ ತಲುಪುವ ಮಾರ್ಗಗಳು ಅವರಿಗೆ ಕರಗತವಾಗಿದ್ದವು. ರಸೂಲ್ ಗಾಲ್ವನ್ ಅವರ ಮಕ್ಕಳು ಹಾಗೂ ನಂತರದ ವಂಶಸ್ಥರು ಲೇಹ್ನಲ್ಲಿಯೇ ಉಳಿದುಕೊಂಡರು.
ಪ್ರವಾಸಿಗರು ಹಾಗೂ ಸಾಹಸಿಗರಿಗೆ ಗಾಲ್ವನ್ ಅವರು ಈ ಪ್ರದೇಶಕ್ಕೆ ದಾರಿ ತೋರಿಸಿದ್ದರಿಂದಲೇ ಕಾಲಾನುಕ್ರಮದಲ್ಲಿ ಈ ಕಣಿವೆಯು ಗಾಲ್ವನ್ ವ್ಯಾಲಿ ಎಂದೇ ಹೆಸರಾಯಿತು.