ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಲ್ಲಿ ವರ್ಷಗಳ ವಿಳಂಬಕ್ಕೆ ಕೊನೆಗೂ ಸುಪ್ರೀಂಕೋರ್ಟ್‌ನ ಮಧ್ಯಪ್ರವೇಶದಿಂದಾಗಿ ತಾರ್ಕಿಕ ಅಂತ್ಯ ದೊರಕಿದಂತಾಗಿದೆ.
ರಾಜಕೀಯ ಪಕ್ಷಗಳ ಮಧ್ಯೆ ಮತ ಸಮರವನ್ನು ಸೃಷ್ಟಿಸುವುದರ ಬದಲಿಗೆ ಈ ಚುನಾವಣೆ ವಿಷಯವು ಸಾಂವಿಧಾನಿಕ ವ್ಯವಸ್ಥೆಗಳ ಮಧ್ಯೆಯೇ ಸಂಘರ್ಷಗಳನ್ನು ಹುಟ್ಟಿಹಾಕಿತ್ತು. ಈ ಹಿಂದೆ ಹಲವು ಸನ್ನಿವೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಗಳು ಚುನಾವಣೆ ನಡೆಸುವ ನಿಟ್ಟಿನಲ್ಲಿ ಸಮಾನ ಪ್ರಮಾಣದ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತ್ತು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವ ಕುರಿತು ಅನಗತ್ಯ ವಿವಾದ ಉಂಟಾಗಿತ್ತು. ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ನಿಂದ ಟೀಕೆಯನ್ನು ಎದುರಿಸಬೇಕಾಯಿತು. ಈ ಬೆಳವಣಿಗೆಗಳಿಗೆ ಈ ಸಂಸ್ಥೆಗಳೇ ಹೊಣೆಯಾಗಬೇಕಿದೆ.
ನಾಲ್ಕು ದಿನಗಳ ಹಿಂದೆ ಆಂಧ್ರಪ್ರದೇಶ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿರುವ ಆದೇಶದ ಪ್ರಕಾರ, ಚುನಾವಣೆಯನ್ನು ನಡೆಸಲು ಸರಿಯಾದ ಸಮಯವನ್ನು ನಿರ್ಧರಿಸುವ ಅಧಿಕಾರ ರಾಜ್ಯ ಚುನಾವಣಾ ಸಮಿತಿ (ಸಿಇಸಿ) ಬಳಿ ಇದೆ ಎಂದು ಸ್ಪಷ್ಟಪಡಿಸಿದೆ. ಚುನಾವಣೆ ಮತ್ತು ಲಸಿಕೆ ಕಾರ್ಯಕ್ರಮಗಳೆರಡೂ ಜನರಿಗೆ ಅತ್ಯಂತ ಪ್ರಮುಖವಾಗಿದ್ದರೂ, ಆರೋಪ ಪ್ರತ್ಯಾರೋಪ ಮಾಡುತ್ತಿರುವ ಎರಡೂ ಪಕ್ಷಗಳು ಚುನಾವಣೆ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದಿದೆ.
ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರವು ಸುಪ್ರೀಂಕೋರ್ಟ್ ಬಾಗಿಲು ತಟ್ಟಿದ್ದು, ಲಸಿಕೆ ಕಾರ್ಯಕ್ರಮ ಜಾರಿಯಲ್ಲಿರುವಾಗ ಚುನಾವಣೆಗಳನ್ನು ನಡೆಸಬಾರದು ಎಂದು ಕೋರಿಕೊಂಡಿದೆ. ಅಲ್ಲೂ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯ ಕರ್ತವ್ಯಗಳನ್ನು ಕೋರ್ಟ್ ಹೇಳಬೇಕೆ? ಎಂದು ಸರ್ಕಾರವನ್ನು ಸುಪ್ರೀಂಕೋರ್ಟ್ ಕೇಳಿದೆ. ಅಲ್ಲದೆ, ಕೋವಿಡ್ ಸಾಂಕ್ರಾಮಿಕ ರೋಗ ತೀವ್ರಗತಿಯಲ್ಲಿ ಹರಡುತ್ತಿದ್ದಾಗ ಚುನಾವಣೆ ನಡೆಸಲು ಸರ್ಕಾರ ಸೂಚಿಸಿತ್ತು. ಆದರೆ, ಸಾಂಕ್ರಾಮಿಕ ರೋಗ ಕಡಿಮೆಯಾಗುತ್ತಿರುವಾಗ ಚುನಾವಣೆ ನಡೆಸಲು ನಿರಾಕರಿಸುತ್ತಿದೆ ಎಂಬುದನ್ನು ಕೋರ್ಟ್ ಗಮನಿಸಿದೆ. ಇದು, ಆಂಧ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಆಂಧ್ರ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಎಲ್ಲಿ ಚುನಾವಣಾ ಆಯುಕ್ತರು ತಪ್ಪಾಗಿ ನಡೆದುಕೊಂಡಿದ್ದಾರೆ ಮತ್ತು ಯಾಕೆ ಅವರ ವಿರುದ್ಧ ಆಡಳಿತ ನಿಂತಿದೆ ಎಂದು ಪ್ರಶ್ನಿಸಿದೆ. ಉಲ್ಲೇಖಿಸಿರುವ ಕಾರಣಕ್ಕಿಂತ ಬೇರೆಯದೆ ಕಾರಣ ಇದೆ ಎಂಬ ಭಾವವನ್ನು ಸರ್ಕಾರದ ವಾದ ಮೂಡಿಸುತ್ತಿದೆ ಎಂದು ನ್ಯಾಯಾಂಗ ಶಂಕೆ ವ್ಯಕ್ತಪಡಿಸಿದೆ. ಚುನಾವಣೆಗೆ ಸಂಬಂಧಿಸಿದಂತೆ ಎಸ್‌ಇಸಿ ನಿರ್ಧಾರವೇ ಅಂತಿಮ ಎಂದು ಸಾಂವಿಧಾನಿಕ ಮೌಲ್ಯವನ್ನು ನ್ಯಾಯಾಲಯ ಕೂಡ ಎತ್ತಿಹಿಡಿದಿದೆ.
ಭಾರತೀಯ ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಅಧಿಕಾರಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ. ಚುನಾವಣೆಗೆ ಸಂಬಂಧಿಸಿದ ವಿಶೇಷ ಅಧಿಕಾರಗಳನ್ನು ಚುನಾವಣಾ ಆಯೋಗಕ್ಕೆ ನೀಡಿದೆ. 243 ಕೆ ನಿಬಂಧನೆಯು ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ತಿದ್ದುಪಡಿಗಳನ್ನು ಮಾಡಿದ್ದರೂ, ಚುನಾವಣೆಗಳನ್ನು ನಡೆಸುವ ಎಲ್ಲ ಅಧಿಕಾರವೂ ರಾಜ್ಯ ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಡುತ್ತದೆ.
ಪಂಚಾಯತಿ ಚುನಾವಣೆಗೆ ನೀಡಿದ 3 ವಾರಗಳ ಕಾಲಾವಧಿಯನ್ನು 2 ವಾರಗಳಿಗೆ ಆಂಧ್ರ ವಿಧಾನಸಭೆಯು ಇಳಿಕೆ ಮಾಡಿತ್ತು. ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಲಹೆಯನ್ನು ರಾಜ್ಯ ಚುನಾವಣಾ ಆಯುಕ್ತರು ಕೇಳಿದರೆ ಸಾಕು. ಚುನಾವಣೆಗೆ ಸರ್ಕಾರದ ಅನುಮತಿಯನ್ನು ಅವರು ತೆಗೆದುಕೊಳ್ಳಬೇಕಿಲ್ಲ ಎಂದು ಸಂವಿಧಾನದಲ್ಲಿ ಸೂಚಿಸಲಾಗಿದೆ. ಆದರೆ, ಇತ್ತೀಚೆಗೆ ಆಂಧ್ರ ವಿಧಾನಸಭೆ ಹೊರಡಿಸಿದ ನಿಲುವಳಿಯ ಪ್ರಕಾರ, ಪಂಚಾಯತಿ ಚುನಾವಣೆಗಳಿಗೆ ರಾಜ್ಯ ಸರ್ಕಾರದ ಅನುಮತಿಯನ್ನು ಚುನಾವಣಾ ಆಯೋಗ ಪಡೆಯಬೇಕು ಎಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹಿಂದೆಂದೂ ಕಂಡು ಕೇಳರಿಯದಂತೆ, ಇಡೀ ಆಡಳಿತ ವ್ಯವಸ್ಥೆ ಮತ್ತು ಉದ್ಯೋಗಿಗಳು ಪಂಚಾಯಿತಿ ಚುನಾವಣೆಗಳಲ್ಲಿ ಚುನಾವಣಾ ಆಯೋಗಕ್ಕೆ ಸಹಕಾರ ನೀಡಬಾರದು ಎಂದು ಸರ್ವಸಮ್ಮತಿಯಿಂದ ನಿರ್ಧರಿಸಿದ್ದರು.
ಚುನಾವಣಾ ಆಯೋಗವನ್ನು ಕಾರ್ಯಾಂಗ ಮತ್ತು ಶಾಸಕಾಂಗವು ಈ ರೀತಿ ಮೂಲೆಗುಂಪು ಮಾಡುವುದು ಹಿಂದೆಂದೂ ನಡೆಯದಂತಹ ಸಂಗತಿ. ತಮ್ಮ ಮೂಗಿನ ನೇರಕ್ಕೆ ಸಾಂವಿಧಾನಿಕ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಅಧಿಕಾರದಲ್ಲಿರುವವರ ಮನಸಿಗೆ ಬಂದಂತೆ ಚುನಾವಣೆಗಳನ್ನು ನಡೆಸುವುದಾದರೆ, ನಿರ್ದಿಷ್ಟ ಅವಧಿಯ ನಂತರ ಚುನಾವಣೆಗಳನ್ನು ನಡೆಸುವ ಮೂಲ ಪ್ರಜಾಪ್ರಭುತ್ವದ ಸೂತ್ರವೇ ಹಾಳಾದಂತಾಗುತ್ತದೆ. ಚುನಾವಣಾ ಆಯೋಗವು ತನ್ನ ವಿವೇಚನೆಯನ್ನು ಬಳಸಿ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಈ ಅಧಿಕಾರವನ್ನು ಬಳಸುವಲ್ಲಿ ಯಾವುದೇ ವ್ಯತ್ಯಯವಾದರೂ ಇಡೀ ವ್ಯವಸ್ಥೆ ಕುಸಿಯುತ್ತದೆ. ಪ್ರತಿ ಸಾಂವಿಧಾನಿಕ ವ್ಯವಸ್ಥೆಯೂ ಸಾಂವಿಧಾನಿಕ ಚೌಕಟ್ಟಿನೊಳಗೆ ಕೆಲಸ ಮಾಡಬೇಕು. ಸಾಂವಿಧಾನಿಕ ಸಂಸ್ಥೆಗಳು ಪರಸ್ಪರ ಸಂಘರ್ಷಕ್ಕೆ ಇಳಿದರೆ ವ್ಯವಸ್ಥೆ ನಾಶವಾಗುತ್ತದೆ. ಇಂತಹ ಸಂಘರ್ಷದಲ್ಲಿ ಜನಸಾಮಾನ್ಯರು ಅಂತಿಮವಾಗಿ ಬಳಲುತ್ತಾರೆ ಎಂದು ಕೋರ್ಟ್ ಈ ಹಿಂದೆ ಹೇಳಿದ್ದನ್ನು ನಾವು ಸ್ಮರಿಸಬಹುದು.