ನವದೆಹಲಿ: ಚೀನಾ ಕ್ಷಿಪ್ರವಾಗಿ 15 ನಿಮಿಷಗಳ ಒಳಗೆ ಕೊರೊನಾ ವೈರಸ್ ಪರೀಕ್ಷೆಯ ಫಲಿತಾಂಶ ಪಡೆಯುತ್ತದೆ. ಅದೇ ಮಾದರಿಯನ್ನು ಇಟಲಿ ಮತ್ತು ಜಪಾನ್ ಹೊಂದಿದ್ದರೆ ಭಾರತ ಮಾತ್ರ ಫಲಿತಾಂಶಕ್ಕಾಗಿ ಒಂದು ದಿನ ಕಾಯಬೇಕಿದೆ.
ವರದಿಗಳ ಪ್ರಕಾರ, ಚೀನಾದಲ್ಲಿನ ಆರೋಗ್ಯ ಅಧಿಕಾರಿಗಳು ಕೊರೊನಾ ವೈರಾಣು ಪರೀಕ್ಷೆಯ ಫಲಿತಾಂಶವನ್ನು ಕೇವಲ 15 ನಿಮಿಷಗಳಲ್ಲಿ ಪಡೆಯುತ್ತಾರೆ. ಆದರೆ, ಭಾರತದಲ್ಲಿ ಇದಕ್ಕೆ 24 ಗಂಟೆಗಳು ಅಥವಾ ಅದಕ್ಕೂ ಹೆಚ್ಚಿನ ಸಮಯ ಬೇಕಾಗುತ್ತದೆ.
ವ್ಯತ್ಯಾಸವೆಂದರೆ ಚೀನಾ ಕ್ಷಿಪ್ರವಾಗಿ 15 ನಿಮಿಷಗಳಲ್ಲಿ ಕೊರೊನಾ ವೈರಸ್ ಪರೀಕ್ಷಾ ವಿಧಾನ ಬಳಸುತ್ತಿದ್ದು, ಇದು ವೈರಸ್ ಇರುವಿಕೆಯನ್ನು ವೇಗವಾಗಿ ಪತ್ತೆ ಹಚ್ಚುತ್ತದೆ. ಶೇ 80ರಷ್ಟು ನಿಖರವಾದ ಪ್ರತಿಕ್ರಿಯೆ ಸಹ ನೀಡುತ್ತದೆ ಎನ್ನಲಾಗುತ್ತದೆ. ಇಟಲಿ ಮತ್ತು ಜಪಾನ್ ಸಹ ಇದೇ ವಿಧಾನ ಬಳಸುತ್ತಿದೆ. ಆದರೆ, ಈ ಪರೀಕ್ಷೆಯನ್ನು ಬ್ರಿಟಿಷ್ ಸರ್ಕಾರ ದೂರ ಇರಿಸಿದೆ.
ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಇಲಾಖೆಯ ಕಾರ್ಯನಿರ್ವಾಹಕ ಏಜೆನ್ಸಿಯಾದ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್, ತನ್ನದೇ ಆದ ಪರೀಕ್ಷೆಯನ್ನು ಅಭಿವೃದ್ಧಿಪಡಿಸುವ ಆಶಯ ಹೊಂದಿದೆ. ಕ್ಷಿಪ್ರವಾಗಿ ಪತ್ತೆಹಚ್ಚುವ ಕೊರೊನಾ ವೈರಸ್ ಫಲಿತಾಂಶ ಪರೀಕ್ಷಾ ವಿಧಾನ ಸಾಕಷ್ಟು ನಿಖರವಾಗಿಲ್ಲ ಎಂದು ಅದು ಹೇಳುತ್ತದೆ. ಇದಕ್ಕೆ ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ನ (ಎಫ್ಡಿಎ) ಅನುಮೋದನೆಯೂ ಇಲ್ಲ ಎಂದು ವಾದಿಸುತ್ತಿದೆ.
ಉತ್ತರ ಕೆರೊಲಿನಾ ಮೂಲದ ಕಂಪನಿ ಬಯೋಮೆಡೋಮಿಕ್ಸ್, ತನ್ನ ಕ್ಷಿಪ್ರ ಪರೀಕ್ಷೆಯ ವಿಧಾನವನ್ನು ದಕ್ಷಿಣ ಕೊರಿಯಾ, ಚೀನಾ, ಇಟಲಿ, ಜಪಾನ್ ಮತ್ತು ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳು ಬಳಸುತ್ತಿದೆ ಎಂದಿದೆ. ಶಂಕಿತ ವ್ಯಕ್ತಿಯ ಬೆರಳು ಚುಚ್ಚಿ ರಕ್ತದ ಹನಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ. ಈ ಫಲಿತಾಂಶದ ಚಿತ್ರಣವು ಮನೆಯಲ್ಲಿಯೇ ಗರ್ಭಧಾರಣೆಯ ಪರೀಕ್ಷೆಯಂತೆಯೇ ಕಂಡುಬರುತ್ತದೆ.
ಕೊರೊನಾ ವೈರಸ್ ಮಾದರಿಗಾಗಿ ಫಲಿತಾಂಶಗಳನ್ನು ಪಡೆಯಲು ಬ್ರಿಟನ್ ಬಳಸುವ ಸ್ವ್ಯಾಬ್ ಪರೀಕ್ಷೆಯು ಸಾಮಾನ್ಯವಾಗಿ 24ರಿಂದ 48 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ.
ಭಾರತದಲ್ಲಿ ಶಂಕಿತ ಕೊರೊನಾ ವೈರಸ್ ವ್ಯಕ್ತಿಯ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತದೆ. ಇದರಲ್ಲಿ ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್‌ಟಿ-ಪಿಸಿಆರ್) ಎಂಬ ಪ್ರಯೋಗಾಲಯದ ಪರೀಕ್ಷಾ ತಂತ್ರವನ್ನು ಬಳಸಲಾಗುತ್ತದೆ.
ಪರೀಕ್ಷೆಗಳಲ್ಲಿ ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಎಂಬ ಜೀನ್ ಆಧಾರಿತ ಮೌಲ್ಯಮಾಪನ ಮತ್ತು ರಿವರ್ಸ್-ಟ್ರಾನ್ಸ್‌ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್‌ಟಿ-ಪಿಸಿಆರ್) ಎಂಬ ಹೆಚ್ಚು ಸೂಕ್ಷ್ಮ ರೂಪದ್ದಾಗಿದೆ. ಪರೀಕ್ಷೆಯ ನಂತರ ಫಲಿತಾಂಶಗಳನ್ನು ಪಡೆಯಲು ಸುಮಾರು 24 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ಕೋವಿಡ್ -19 ಸೋಂಕು ನಿರ್ಣಯವನ್ನು ಆರ್‌ಟಿ-ಪಿಸಿಆರ್ ಅಥವಾ ಉಸಿರಾಟ ಅಥವಾ ರಕ್ತದ ಮಾದರಿಗಳಿಗೆ ಜೀನ್ ಅನುಕ್ರಮದಿಂದ ದೃಢೀಕರಿಸಬೇಕು ಎನ್ನುತ್ತದೆ.
ಕೋವಿಡ್ -19 ಶಂಕಿತರ ಮಾದರಿಗಳ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಪುಣೆ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಅಧಿಕಾರಿಗಳು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಇದುವರೆಗೂ 43 ಪ್ರಕರಣಗಳು ದೃಢಪಟ್ಟಿವೆ.