ರಾಯ್ಪುರ್: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಾಧ್ಯಮಗೋಷ್ಟಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು 'ನಡ್ಡಾ ಯಾರು' ಎಂದು ಪ್ರಶ್ನಿಸಿದ್ದರು. ಇದಾದ ಒಂದು ದಿನದ ನಂತರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ವಾಕ್ಸಮರ ಪ್ರಾರಂಭವಾಗಿದೆ.
'ರಾಹುಲ್ ಗಾಂಧಿ, ಅವರ ಕುಟುಂಬ ಮತ್ತು ಕಾಂಗ್ರೆಸ್ ಚೀನಾ ಪರವಾಗಿರುವುದನ್ನು ಯಾವಾಗ ನಿಲ್ಲಿಸುತ್ತದೆ? ಅವರು ಉಲ್ಲೇಖಿಸುತ್ತಿರುವ ಅರುಣಾಚಲ ಪ್ರದೇಶ ಸೇರಿದಂತೆ ಸಾವಿರಾರು ಕಿ.ಮೀ. ಪ್ರದೇಶವನ್ನು ಚೀನಿಯರಿಗೆ ಉಡುಗೊರೆಯಾಗಿ ಪಂಡಿತ್ ನೆಹರೂ ಹೊರತು ಬೇರಾರು ನೀಡಿಲ್ಲ ಎಂಬುದನ್ನು ಅವರು ನಿರಾಕರಿಸುತ್ತಾರೆಯೆ? ಕಾಂಗ್ರೆಸ್ ಚೀನಾಗೆ ಶರಣಾಗುವುದು ಏಕೆ?' ಎಂದು ಜೆ.ಪಿ. ನಡ್ಡಾ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಓದಿ: ಹಸಿವು, ದಣಿವಿನಿಂದ ಬಳಲಿ ಸಾವನ್ನಪ್ಪಿದ 80 ವರ್ಷದ ವೃದ್ಧ
ಬಿಜೆಪಿ ಅಧ್ಯಕ್ಷರನ್ನು ಕುರಿತು ವ್ಯಂಗ್ಯವಾಡಿರುವ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆಲ್, 'ನಡ್ಡಾ' ಬಾಲ್ಯದ ದಿನಗಳಲ್ಲಿ ನಾವು ತಿನ್ನುತ್ತಿದ್ದ ಒಂದು ಬಗೆಯ ತಿಂಡಿ. ನಾವು 5 ಪೈಸೆಗೆ ಎರಡು ತುಂಡು ತಿಂಡಿಗಳನ್ನು ಖರೀದಿಸುತ್ತಿದ್ದೆವು ಎಂದು ಹೇಳಿದ್ದರು. ಬಾಘೆಲ್ ಹೇಳಿಕೆಯ ನಂತರ ಛತ್ತೀಸ್ಗಡ್ ಕಾಂಗ್ರೆಸ್ ಟ್ವಿಟರ್ನಲ್ಲಿ ಹಳದಿ ಕುರುಕಲು ತಿಂಡಿಯ ಫೋಟೋ ಪೋಸ್ಟ್ ಮಾಡಿದೆ.