ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಾಗರಿಕ ಸೇವೆಗಳ ರಾಷ್ಟ್ರೀಯ ಕಾರ್ಯಕ್ರಮ 'ಮಿಷನ್ ಕರ್ಮಯೋಗಿ'ಯನ್ನು ಘೋಷಿಸಲಾಗಿದೆ. ಈ ನೂತನ ಯೋಜನೆಯು ಭಾರತೀಯ ನಾಗರಿಕ ಸೇವಕ (ಸಿವಿಲ್ ಸರ್ವೆಂಟ್)ರನ್ನು ಸೃಜನಶೀಲ, ರಚನಾತ್ಮಕ, ನವೀನ, ವೃತ್ತಿಪರ, ಪ್ರಗತಿಪರ ಮತ್ತು ಶಕ್ತಿಯುತವಾಗಿ ಸಾಮಾಜಿಕ ಸವಾಲುಗಳನ್ನು ಎದುರಿಸುವವರನ್ನಾಗಿ ರೂಪಿಸುವ ಉದ್ದೇಶ ಹೊಂದಿದೆ.
ಮಿಷನ್ ಕರ್ಮಯೋಗಿಯ ಉದ್ದೇಶ:
- ಆಡಳಿತವನ್ನು ಸಮರ್ಥವಾಗಿ ನಿಭಾಯಿಸುವುದರ ಜೊತೆಗೆ ತಮ್ಮ ವೃತ್ತಿ ಕ್ಷೇತ್ರಕ್ಕೆ ಸಂಬಂಧಿತ ಜ್ಞಾನ ಪಡೆದುಕೊಳ್ಳಲು ಅಧಿಕಾರಿಗಳನ್ನು ಪ್ರೇರೇಪಿಸುವುದು.
- ನೇಮಕಾತಿ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಮತ್ತು ಸರಿಯಾದ ಕೆಲಸಕ್ಕೆ ಸರಿಯಾದ ಅಭ್ಯರ್ಥಿ ನಿಯುಕ್ತಿಗೊಳಿಸುವುದು
- ನೇಮಕಾತಿಯಿಂದ ಹಿಡಿದು, ಒಬ್ಬ ನಾಗರಿಕ ಸೇವಕನ ವೃತ್ತಿಯ ಅವಧಿಯಲ್ಲೂ ಹೆಚ್ಚಿನ ಕೌಶಲ್ಯ ವೃದ್ಧಿಸಲು ಉತ್ತೇಜಿಸುವುದು
- ದೇಶದ ಆರ್ಥಿಕತೆ ಬೆಳೆದಂತೆ ಉಂಟಾಗುವ ಸಂಕೀರ್ಣತೆಗಳನ್ನು ಸಮರ್ಥವಾಗಿ ನಿಭಾಯಿಸುವ ಅಧಿಕಾರಿಗಳನ್ನು ರೂಪಿಸುವುದು
- ದೇಶದ ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ಸುಧಾರಣೆ ತರಲು ಇದು ಸೂಕ್ತ ಸಮಯ. ಈ ಉದ್ದೇಶದಿಂದ ಮಿಷನ್ ಕರ್ಮಯೋಗಿ ಪ್ರಮುಖವಾಗಿದೆ
ಇತರ ಉದ್ದೇಶಗಳು :
- ಜಂಟಿ ಕಾರ್ಯದರ್ಶಿ (ಜೆಎಸ್) ಮಟ್ಟದಲ್ಲಿ ನೇಮಕಾತಿಗಳಿಗೆ ಸಂಬಂಧಿಸಿದಂತೆ, ಉನ್ನತ ಆಡಳಿತಾಧಿಕಾರಿಗಳ ಕೇಡರ್ ಆಗಿರುವ ಭಾರತೀಯ ಆಡಳಿತ ಸೇವೆ (ಐಎಎಸ್)ಯ ಪ್ರಾಬಲ್ಯ ಕೊನೆಗೊಳಿಸುವುದು. ಈ ಹುದ್ದೆಗೆ, ಭಾರತೀಯ ಕಂದಾಯ ಸೇವೆ, ಭಾರತೀಯ ಖಾತೆಗಳು ಮತ್ತು ಲೆಕ್ಕಪರಿಶೋಧಕ ಸೇವೆ ಮತ್ತು ಭಾರತೀಯ ಆರ್ಥಿಕ ಸೇವೆಯಂತಹ ಇತರ ಕೇಡರ್ಗಳ ನೇಮಕ ಮಾಡುವುದು.
- ಜೆಎಸ್ ಮಟ್ಟದ ಇಬ್ಬರು ಅಧಿಕಾರಿಗಳಲ್ಲಿ ಒಬ್ಬ ಐಎಎಸ್ ಹೊರತುಪಡಿಸಿ, ಇತರ ವಿಭಾಗದಿಂದ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದು.
- ಇದರ ಜೊತೆಗೆ ಖಾಸಗಿ ಕ್ಷೇತ್ರದ ಉನ್ನತ ಅಧಿಕಾರಿಗಳನ್ನು ಪ್ರೋತ್ಸಾಹಿಸುವುದು.