ಮಾಲ್ಡಾ(ಪಶ್ಚಿಮ ಬಂಗಾಳ): ಜಿಲ್ಲೆಯ ಚೀನಾ ಬಜಾರ್, ದುರ್ಗರಂತೋಲಾ, ಬಾಲುಗ್ರಾಮ್ ಮತ್ತು ಪರ್ ಅನೂಪ್ನಗರದ ನದಿ ತೀರದಲ್ಲಿ ವಾಸಿಸುತ್ತಿರುವ ಕುಟುಂಬಗಳು ಕಳೆದ ತಿಂಗಳು ಉಂಟಾದ ಗಂಗಾ ನದಿಯ ಭೀಕರ ಪ್ರವಾಹಕ್ಕೆ ತುತ್ತಾಗಿದ್ದು, ಇದೀಗ ವಾಸಿಸಲು ಸೂರಿಲ್ಲದೆ ಪರಿತಪಿಸುವಂತಾಗಿದೆ.
ಮಾಲ್ಡಾ ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ಗಂಗಾ ನದಿಯ ಪ್ರವಾಹ ಪರಿಣಾಮ ಬೀರಿದ್ದು, ವಿಶಾಲವಾದ ಭೂಮಿಯಲ್ಲಿ ಬೆಳೆದ ಭತ್ತ ಮತ್ತು ತರಕಾರಿ ಬೆಳೆಗಳು ಸೇರಿದಂತೆ ಜನ ವಾಸಿಸುತ್ತಿದ್ದ ಮನೆಗಳು ಸಹ ನೀರುಪಾಲಾಗಿವೆ. ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ವಾಸಿಸಲು ಜಾಗವಿಲ್ಲದೆ, ತಿನ್ನಲು ಆಹಾರವಿಲ್ಲದೆ ಸಂಕಷ್ಟದಲ್ಲಿ ಬದುಕುವಂತಾಗಿದೆ ಇಲ್ಲಿನ ಜನರ ಪರಿಸ್ಥಿತಿ.
ಮಾಲ್ಡಾದ ಬಹುತೇಕ ರಸ್ತೆಗಳು ಕುಸಿತಗೊಂಡಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗಲು ಸಹ ಇಲ್ಲಿನ ಜನರಿಗೆ ಸಾಧ್ಯವಾಗದೆ, ಜೀವ ಭಯದಲ್ಲೇ ಬದುಕುವಂತಾಗಿದೆ. ಮಳೆ ಹಾಗೂ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದರೂ ಸಹ ಸರ್ಕಾರ ಅಥವಾ ಯಾವುದೇ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಗಂಗಾ ನದಿ ಪ್ರವಾಹದಿಂದ ನಮ್ಮ ಮನೆಗಳು ಕೊಚ್ಚಿ ಹೋಗಿರುವುದು ನಮ್ಮ ಜೀವನವನ್ನೇ ಕಸಿದುಕೊಂಡಂತಾಗಿದೆ. ನಾನು ದ್ವಿತೀಯ ಪಿಯುಸಿ ಪರೀಕ್ಷೆ ತಯಾರಿಯಲ್ಲಿದ್ದು, ಇದೀಗ ನನ್ನ ಶೈಕ್ಷಣಿಕ ಜೀವನವೇ ಮೊಟಕುಗೊಂಡಂತಾಗಿದೆ. ಕಳೆದ ಒಂದು ತಿಂಗಳಿನಿಂದ ವಾಸಿಸಲು ಸ್ಥಳವಿಲ್ಲದೆ ಪರದಾಡುತ್ತಿದ್ದು, ಸರ್ಕಾರ ಮಾತ್ರ ನಮ್ಮ ಬಗ್ಗೆ ಗಮನ ಹರಿಸದಿರುವುದು ಅತೀವ ಬೇಸರ ತಂದಿದೆ ಎಂದು ಜಹೇದಾ ಎಂಬ ವಿದ್ಯಾರ್ಥಿನಿ ಹೇಳಿದ್ದಾಳೆ.