ಕೋಲ್ಕತ್ತಾ (ಪಶ್ಚಿಮ ಬಂಗಾಳ): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ರಾಜ್ಯವ್ಯಾಪಿ 'ನಬಣ್ಣ ಚಲೋ' ಆಂದೋಲನವನ್ನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇಂದು ಹಮ್ಮಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.
ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ನೇತೃತ್ವದಲ್ಲಿ ಈ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಮಮತಾ ಸರ್ಕಾರದ ಭ್ರಷ್ಟಾಚಾರ ಹಾಗೂ ಗೂಂಡಾಗಿರಿಯನ್ನು ಎತ್ತಿ ತೋರಿಸಲು ಈ ಆಂದೋಲನಕ್ಕೆ ಕರೆ ನೀಡಲಾಗಿದೆ ಎಂದು ಬಿಜೆಪಿ ತಿಳಿಸಿದೆ. ಕೋಲ್ಕತ್ತಾದ ಬಿಜೆಪಿಯ ರಾಜ್ಯ ಕೇಂದ್ರ ಕಚೇರಿಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿರುವ ಪಕ್ಷದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಕ್ಟೋಬರ್ 2 ರಂದು, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದ ದಿಲೀಪ್ ಘೋಷ್, ಭ್ರಷ್ಟ ಮತ್ತು ಗೂಂಡಾ ರಾಜಕೀಯ ಮಾಡುತ್ತಿರುವ ಸರ್ಕಾರದ ವಿರುದ್ದ ರಾಜ್ಯ ಘಟಕವು ಅಕ್ಟೋಬರ್ 8 ರಂದು ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಹೇಳಿಕೆ ನೀಡಿದ್ದರು.