ಭೋಪಾಲ್: ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಸೋಮವಾರ ಮಧ್ಯಪ್ರದೇಶದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವೆಬ್ ಸರಣಿ "ಎ ಸೂಟಬಲ್ ಬಾಯ್" ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂಬ ಆರೋಪದಡಿ ಈ ದೂರು ದಾಖಲಾಗಿದೆ.
ದೇವಾಲಯದಲ್ಲಿನ ಚುಂಬನದ ದೃಶ್ಯವು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದೆ. ಈ ಹಿನ್ನೆಲೆ ನೆಟ್‌ಫ್ಲಿಕ್ಸ್ ಉಪಾಧ್ಯಕ್ಷ ಮೋನಿಕಾ ಶೆರ್ಗಿಲ್ ಮತ್ತು ಸಾರ್ವಜನಿಕ ನೀತಿಗಳ ನಿರ್ದೇಶಕಿ ಅಂಬಿಕಾ ಖುರಾನಾ ಅವರ ವಿರುದ್ಧ ದೂರು ದಾಖಲಾಗಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.
ನೆಟ್‌ಫ್ಲಿಕ್ಸ್ ಮತ್ತು ಸರಣಿಯ ನಿರ್ಮಾಪಕರಿಂದ ಈ ಬಗ್ಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿರುವ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ರಾಷ್ಟ್ರೀಯ ಕಾರ್ಯದರ್ಶಿ ಗೌರವ್ ತಿವಾರಿ ಅವರು ನೀಡಿದ ದೂರಿನ ಮೇರೆಗೆ ರೇವಾ ಪೊಲೀಸರು ಈ ಇಬ್ಬರ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅಷ್ಟೇ ಅಲ್ಲ, ಚುಂಬನದ ದೃಶ್ಯವು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಹಾಗಾಗಿ, ವೆಬ್ ಸರಣಿಯಲ್ಲಿನ ಆಕ್ಷೇಪಾರ್ಹ ದೃಶ್ಯ ತೆಗೆದುಹಾಕುವಂತೆಯೂ ಅವರು ಒತ್ತಾಯಿಸಿದ್ದಾರೆ.
ನೆಟ್‌ಫ್ಲಿಕ್ಸ್‌ನ ‘ಎ ಸೂಟಬಲ್ ಬಾಯ್’ ಸರಣಿಯನ್ನು ಸ್ಟ್ರೀಮ್ ಹಾಗೂ ಚುಂಬನದ ದೃಶ್ಯ ಸೇರಿದಂತೆ ಈ ಮಾಹಿತಿ ನೀಡುವಂತೆ ಅಧಿಕಾರಿಗಳನ್ನು ಕೇಳಲಾಗುತ್ತು. ಅಧಿಕಾರಿಗಳ ವರ್ಗದ ವರದಿ ಹಿನ್ನೆಲೆ ಈ ದೂರು ದಾಖಲಿಸಲಾಗಿದೆ ಎನ್ನಲಾಗುತ್ತಿದೆ.
ಅಧಿಕಾರಿಗಳಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ರೇವಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.