ನವದೆಹಲಿ: ಅಕ್ಟೋಬರ್ 4ರಂದು ನಡೆಯಲಿರುವ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ವೇಳೆ ಅಭ್ಯರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಕೇಂದ್ರ ನಾಗರಿಕ ಸೇವಾ ಆಯೋಗ ಪ್ರಕಟಣೆ ಹೊರಡಿಸಿದೆ.
ಪೂರ್ವಭಾವಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಖುದ್ದಾಗಿ ಹ್ಯಾಂಡ್ ಸ್ಯಾನಿಟೈಸರ್ಸ್ ತೆಗೆದುಕೊಂಡು ಬರಬೇಕು ಎಂದು ಯುಪಿಎಸ್ಸಿ ತಿಳಿಸಿದೆ. ಮಾಸ್ಕ್ ಹಾಕಿಕೊಳ್ಳದೇ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಅವಕಾಶ ನೀಡುವುದಿಲ್ಲ ಎಂದು ಯುಪಿಎಸ್ಸಿ ತಿಳಿಸಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಅವಶ್ಯ ಎಂದು ಹೇಳಿದೆ.
ಮೇ. 31ರಂದು ನಡೆಯಬೇಕಾಗಿದ್ದ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ಕರೊನಾ ವೈರಸ್ ಹಾಗೂ ಲಾಕ್ಡೌನ್ ಕಾರಣ ಅಕ್ಟೋಬರ್ 4ಕ್ಕೆ ಮುಂದೂಡಿಕೆ ಮಾಡಲಾಗಿತ್ತು.ನಾಗರಿಕ ಸೇವಾ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದ್ದು, ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನಗಳನ್ನೊಳಗೊಂಡಿದೆ.ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಸೇರಿದಂತೆ ವಿವಿಧ ಹುದ್ದೆಗಳಿಗಾಗಿ ಈ ಪರೀಕ್ಷೆ ಆಯೋಜನೆ ಮಾಡಲಾಗುತ್ತದೆ.