ಸೂರತ್ (ಗುಜರಾತ್): ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ರಾಷ್ಟ್ರೀಯ ನಾಯಕರು ಗುಜರಾತ್ನತ್ತ ಮುಖಮಾಡಿದ್ದಾರೆ. ಇತ್ತ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕೂಡ ಅಖಾಡಕ್ಕೆ ಧುಮುಕಿದ್ದು, ಇಂದು ಭರೂಚ್ ಹಾಗೂ ಅಹಮದಾಬಾದ್‌ನ ಱಲಿಗಳಲ್ಲಿ ಭಾಗವಹಿಸಲಿದ್ದಾರೆ.
ಎಐಎಂಐಎಂ, ಬಿಟಿಪಿ (ಭಾರತೀಯ ಬುಡಕಟ್ಟು ಪಕ್ಷ)ಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಇದು ಅಹಮದಾಬಾದ್‌ನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಗುಜರಾತ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭರೂಚ್‌ಗೆ ತೆರಳಿ, ಅಲ್ಲಿ ಬಿಟಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಭರೂಚ್‌ನಲ್ಲಿ ಸಾರ್ವಜನಿಕ ಸಭೆಯೂ ನಡೆಯಲಿದೆ. ಆ ಬಳಿಕ ಅಹಮದಾಬಾದ್‌ನಲ್ಲಿಯೂ ಸಾಮಾನ್ಯ ಸಭೆ ನಡೆಯಲಿದೆ. ಗುಜರಾತ್ ಜನರು ನಮ್ಮನ್ನು ಆಶೀರ್ವದಿಸಿ ಬೆಂಬಲಿಸುತ್ತಾರೆಂದು ಆಶಿಸುತ್ತೇವೆ. ಜನರು ನಮ್ಮನ್ನು ಪ್ರೀತಿಯಿಂದ ಆಶೀರ್ವದಿಸುತ್ತಾರೆ. ಇಲ್ಲಿ ನಾವು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದೇವೆ. ಆ ಮೂಲಕ ಗುಜರಾತ್ ಜನರ ಹೃದಯವನ್ನು ಗೆಲ್ಲಲು ಪ್ರಯತ್ನಿಸುತ್ತೇವೆ ಎಂದರು.
ನಾವು ಇದೇ ಮೊದಲ ಬಾರಿಗೆ ಗುಜರಾತ್‌ನಲ್ಲಿ ಚುನಾವಣಾ ಕಣಕ್ಕೆ ಬಂದಿದ್ದೇವೆ. ಹಾಗಾಗಿ ಒಟ್ಟಿಗೆ ಇಷ್ಟು ಸ್ಥಳಗಳಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಆ ಕಾರಣದಿಂದ ಬಿಟಿಪಿಯೊಂದಿಗೆ ಚರ್ಚಿಸಿ, ನಾವು ಒಟ್ಟಾಗಿ ಮೈತ್ರಿಯಲ್ಲಿ ಸ್ಪರ್ಧಿಸುತ್ತಿದ್ದೇವೆ ಎಂದು ಹೇಳಿದರು.