ಹೈದರಾಬಾದ್: ಶುಕ್ರವಾರ ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ ನೀಡಿದ ಅಮೆರಿಕ ರಾಯಭಾರಿ ಜೋಯಲ್ ರೀಫ್ಮನ್ ಅವರು ಶಿಕ್ಷಣ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಈನಾಡು ಸಮೂಹ ಸಂಸ್ಥೆಯ ಮುಖ್ಯಸ್ಥರಾದ ರಾಮೋಜಿ ರಾವ್ ಅವರನ್ನು ಕೊಂಡಾಡಿದರು.
ಜೋಯಲ್ ರೀಫ್ಮನ್ ಅವರು ಈನಾಡು, ಈಟಿವಿ, ರಾಮೋಜಿ ಫಿಲ್ಮ್ ಸಿಟಿ ಮತ್ತು ಈಟಿವಿ ಭಾರತ್ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಡ್ರೂ ಗಿಬ್ಲಿನ್ ಮತ್ತು ಮಾಧ್ಯಮ ಸಲಹೆಗಾರ ಮೊಹಮ್ಮದ್ ಬಸಿತ್ ಅವರೊಂದಿಗೆ ಈಟಿವಿ ಭಾರತ್ ಸ್ಟುಡಿಯೋ ವೀಕ್ಷಿಸಿದರು.
ಈಟಿವಿ ಭಾರತ ಕಾರ್ಯನಿರ್ವಾಹಕ ನಿರ್ದೇಶಕ ಬಾಪಿನೀಡು ಚೌಧರಿ ಅವರು ಈಟಿವಿ ಭಾರತ್ ಆ್ಯಪ್ ಹಾಗೂ ನಿರ್ವಹಣೆ ಕುರಿತು ಸಂಪೂರ್ಣವಾಗಿ ಜೋಯಲ್ ರೀಫ್ಮನ್ ಅವರಿಗೆ ವಿವರಿಸಿದರು.
ಕ್ಷಿಪ್ರ ಅವಧಿಯಲ್ಲಿ ಡಿಜಿಟಲ್ ಸುದ್ದಿ ಕ್ಷೇತ್ರದಲ್ಲಿ ಈಟಿವಿ ಭಾರತ ಗಣನೀಯ ಪ್ರಗತಿ ಸಾಧಿಸುತ್ತಿದೆ. ಈಟಿವಿ ಭಾರತ ದೇಶದ ಪ್ರಮುಖ 13 ಭಾಷೆಗಳಲ್ಲಿ ದಿನದ 24 ಗಂಟೆ ಸುದ್ದಿ ನೀಡುತ್ತದೆ. ಹಿಂದಿ, ಕನ್ನಡ, ತಮಿಳು, ತೆಲುಗು, ಉರ್ದು, ಮಲಯಾಳಂ, ಗುಜರಾತಿ, ಮರಾಠಿ, ಬೆಂಗಾಲಿ, ಒಡಿಶಾ, ಅಸ್ಸಾಂ, ಪಂಜಾಬಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಈಟಿವಿ ಭಾರತದ ಸುದ್ದಿಗಳು ಲಭ್ಯವಿದೆ ಎಂದು ಬಾಪಿನೀಡು ವಿವರಿಸಿದರು.
ಗ್ರಾಮೀಣ ಸುದ್ದಿಯಿಂದ ಅಂತಾರಾಷ್ಟ್ರೀಯ ಸುದ್ದಿಗಳನ್ನು ಮೊಬೈಲ್ ಆ್ಯಪ್ ಮೂಲಕ ಈಟಿವಿ ಭಾರತ ನೀಡಲಾಗುತ್ತಿದೆ. ಈ ಮೊಬೈಲ್ ಆ್ಯಪ್ ವಸ್ತುನಿಷ್ಠ ಹಾಗೂ ವಿಶ್ವಾಸಾರ್ಹತೆಗೆ ಹೆಸರುವಾಸಿ. ಜೊತೆಗೆ ಮೊಬೈಲ್ ಆ್ಯಪ್ ಮೂಲಕ ಸುದ್ದಿಯ ಜೊತೆಗೆ ನ್ಯೂಸ್ ಬುಲೆಟಿನ್ ನೀಡುವ ದೇಶದ ಮೊದಲ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.
ಬೃಹತ್ ಸುದ್ದಿ ಸಂಸ್ಥೆ ನಿರ್ಮಿಸಿದ ಮತ್ತು ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಒದಗಿಸುತ್ತಿರುವ ರಾಮೋಜಿ ರಾವ್ ಅವರ ಸೇವೆಗೆ ಇದೇ ವೇಳೆ ರೀಫ್ಮನ್ ಅಭಿನಂದನೆ ಸಲ್ಲಿಸಿದರು.