ನವದೆಹಲಿ: ಕಳೆದ 48 ಗಂಟೆಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೂವರು ಸಿಆರ್ಪಿಎಫ್ ಯೋಧರು ಹುತಾತ್ಮರಾದ ಬಳಿಕ ಸಿಆರ್ಪಿಎಫ್ ತನ್ನ ಕಾರ್ಯಾಚರಣೆಯ ನೀತಿಯನ್ನು ಕೊಂಚ ಪರಿಷ್ಕರಣೆ ಮಾಡಿಕೊಂಡಿದೆ.
ಕಾದು ನೋಡಿ, ಸಮಯ ತೆಗೆದುಕೊಳ್ಳಿ ಎನ್ನುವ ಸಂದೇಶವನ್ನು ಸಿಆರ್ಪಿಎಫ್ ಯೋಧರಿಗೆ ರವಾನಿಸಲಾಗಿದೆ. ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ 55,000ಕ್ಕೂ ಹೆಚ್ಚಿನ ಸಿಆರ್ಪಿಎಫ್ ಯೋಧರಿಗೆ ಉಗ್ರರ ಸತತ ದಾಳಿಯ ಬಳಿಕ ಈ ನೀತಿಯ ಪರಿಷ್ಕರಣೆ ಮಾಡಿ ಕಾದು ನೋಡುವ ತಂತ್ರ ಅನುಸರಿಸಲು ಸೂಚಿಸಲಾಗಿದೆ.
ಭಾನುವಾರದಿಂದ ಎರಡು ದಿನಗಳ ಕಾಲ ನಡೆದ ಉಗ್ರರ ಜೊತೆಗಿನ ಸೇನೆಯ ಗುಂಡಿನ ಚಕಮಕಿಯಲ್ಲಿ ಮೂವರು ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಸತ್ತಿದ್ದಾನೆ ಎಂದು ಭಾವಿಸಲಾಗಿದ್ದ ಉಗ್ರನೋರ್ವ ಗುಂಡಿನ ದಾಳಿ ನಡೆಸಿದ್ದ. ಈ ವೇಳೆ ಇಬ್ಬರು ಪೊಲೀಸರು ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದ.