ಬೀಜಿಂಗ್: ಕೊರೊನಾ ವೈರಸ್ ಸೋಂಕಿನಿಂದ ಚೀನಾದಲ್ಲಿ ಒಂದೇ ದಿನ 242 ಜನರು ಬಲಿಯಾಗಿದ್ದು, ಈ ಸೋಂಕಿಗೆ ಬಲಿಯಾದವರ ಸಂಖ್ಯೆ 1,355ರ ಗಡಿ ದಾಟಿದೆ ಎಂದು ವರದಿಯಾಗಿದೆ.
ಸಾವು ನೋವಿನಲ್ಲಿ ಸಾರ್ಸ್ ಮೀರಿಸಿರುವ ಕೊರೊನಾ ವೈರಸ್ ಚೀನಾದಲ್ಲಿ ದಿನದಿಂದ ದಿನಕ್ಕೆ ರೌದ್ರತಾಂಡವ ಆಡ್ತಿದ್ದು, ಸೋಂಕಿತರ ಪ್ರಮಾಣದ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಇಲ್ಲಿಯವರೆಗೆ ಹೊಸ 14,840 ಶಂಕಿತ ಪ್ರಕರಣಗಳು ಕಂಡು ಬಂದಿದ್ದು. ಒಟ್ಟು 60,000 ಜನರಲ್ಲಿ ಈ ಸೋಂಕು ಕಂಡು ಬಂದಿದೆ. ಹುಬೈ ಪ್ರಾಂತ್ಯದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿದ್ದು, ಏನೇ ಕ್ರಮ ಕೈಗೊಂಡರೂ ಸೋಂಕು ಹತೋಟಿಗೆ ಬರುತ್ತಿಲ್ಲ. ಸಾವಿರಾರು ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚೀನಾದ ವಿವಿಧ 31 ಪ್ರಾಂತ್ಯಗಳಲ್ಲಿ ಈ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅಲ್ಲಿನ ಸರ್ಕಾರ ಸೋಂಕು ಹತೋಟಿಗೆ ತೆರಲು ಎಲ್ಲ ರೀತಿಯ ಕ್ರಮ ಕೈಗೊಂಡಿದೆ.