ಕಾನ್ಪುರ (ಉತ್ತರ ಪ್ರದೇಶ): ಜುಲೈ 10 ರಂದು ಉತ್ತರ ಪ್ರದೇಶದ ಪೊಲೀಸರ ಎನ್ಕೌಂಟರ್ನಲ್ಲಿ ಹತ್ಯೆಯಾದ ಹಿಸ್ಟರಿ ಶೀಟರ್ ವಿಕಾಸ್ ದುಬೆ ತೀವ್ರ ರಕ್ತಸ್ರಾವ ಹಾಗೂ ಗಾಯಗಳಿಂದಾದ ಆಘಾತದಿಂದ ಮೃತಪಟ್ಟಿದ್ದಾನೆ ಎಂದು ಮರಣೋತ್ತರ ವರದಿ ಸ್ಪಷ್ಟಪಡಿಸಿದೆ.
ಇದೇ ವೇಳೆ, ವಿಕಾಸ್ ದುಬೆಗೆ ಕೋವಿಡ್ ಸೋಂಕು ಪರೀಕ್ಷೆ ಕೂಡಾ ಮಾಡಲಾಗಿದ್ದು, ವರದಿಯ ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಜುಲೈ 3ರಂದು ಒಬ್ಬ ಡಿಎಸ್ಪಿ ಸೇರಿದಂತೆ ಎಂಟು ಮಂದಿ ಪೊಲೀಸರ ಹತ್ಯೆ ಮಾಡಿದ ಆರೋಪದಲ್ಲಿ ವಿಕಾಸ್ ದುಬೆಗೆ ಪೊಲೀಸರು ಬಲೆ ಬೀಸಿದ್ದರು. ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಮಹಾಕಾಲ ದೇವಾಲಯದ ಬಳಿ ಜುಲೈ 9ರಂದು ಈತ ಸೆರೆಯಾಗಿದ್ದನು.
ಅದಾದ ಮರುದಿನ ಉತ್ತರ ಪ್ರದೇಶದ ಕಾನ್ಪುರಕ್ಕೆ ಕರುತರುವ ವೇಳೆ ಪರಾರಿಯಾಗಲು ಯತ್ನಿಸಿದ ವಿಕಾಸ್ ದುಬೆಯನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಸ್ಪಷ್ಟನೆ ನೀಡಿದ್ದರು.
ಉತ್ತರ ಪ್ರದೇಶದ ಆಸ್ಪತ್ರೆಯಗೆ ವಿಕಾಸ್ ದುಬೆಯ ಮೃತ ದೇಹ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈಗ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ತೀವ್ರ ರಕ್ತ ಸ್ರಾವ ಹಾಗೂ ಆಘಾತದಿಂದ ದುಬೆ ಸಾವನ್ನಪ್ಪಿದ್ದಾನೆ ಎಂದು ವರದಿ ತಿಳಿಸಿದೆ.