ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರದ್ಧುಗೊಂಡ ಬಳಿಕ ಮೇಲಿಂದ ಮೇಲೆ ಭಾರತದೊಳಗೆ ನುಸುಳಲು ಪಾಕ್ ವಿಫಲ ಪ್ರಯತ್ನ ನಡೆಸುತ್ತಿದ್ದು, ಇದೀಗ ಪಾಕ್ನ ಬ್ಯಾಟ್ ಸೇನೆಯ ಕೆಲ ಸೈನಿಕರನ್ನ ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದ್ದು, ಅದರ ವಿಡಿಯೋ ರಿಲೀಸ್ ಮಾಡಿದೆ.
ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಭಾರತದ ಕೆರನ್ ಸೆಕ್ಟರ್ನ ಕುಪ್ವಾರ್ ಗಡಿಯೊಳಗೆ ನುಸುಳಲು ಯತ್ನಿಸಿದ್ದ ಐವರು ಬ್ಯಾಟ್ ಸೇನೆಯ ಸೈನಿಕರನ್ನ ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಕಾರ್ಯಾಚರಣೆಯ ವಿಡಿಯೋವನ್ನು ಭಾರತೀಯ ಸೇನೆ ಇದೀಗ ರಿಲೀಸ್ ಮಾಡಿದೆ.
ಇಂಡಿಯನ್ ಆರ್ಮಿ ಬಿಡುಗಡೆ ಮಾಡಿರುವ 1 ನಿಮಿಷ 52 ಸೆಕೆಂಡ್ ವಿಡಿಯೋದಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನ ಬ್ಯಾಟ್ ತಂಡದ ಸಿಬ್ಬಂದಿಯ ಹತ್ಯೆ ಮಾಡಲಾಗಿದ್ದು, ಮೃತದೇಹಗಳು ಬಿದ್ದಿವೆ. ಅರಣ್ಯ ಪ್ರದೇಶದ ಬಂಡೆಯ ಮೇಲೆ ಹಾಗೂ ಮಧ್ಯೆ ಮೃತದೇಹಗಳು ಬಿದ್ದಿವೆ.
ಈ ಹಿಂದೆ ಕೂಡ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ್ದ ಬ್ಯಾಟ್ ಯೋಧರನ್ನ ಭಾರತೀಯ ಸೇನೆ ಹೊಡೆದುರುಳಿಸಿತ್ತು. ಆ ವೇಳೆ ಮೃತದೇಹಗಳನ್ನು ತೆಗೆದುಕೊಂಡು ಹೋಗುವಂತೆ ಭಾರತ ಸೂಚನೆ ಸಹ ನೀಡಿತ್ತು.