ನವದೆಹಲಿ: ಭಾರತದ ಮೊದಲ ಸೋಷಿಯಲ್ ಮೀಡಿಯಾ ಸೂಪರ್ ಆ್ಯಪ್ 'ಎಲಿಮೆಂಟ್ಸ್' ( 'Elyments') ಅನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಬಿಡುಗಡೆ ಮಾಡಿದರು.
ಹಲವಾರು ತಿಂಗಳುಗಳಿಂದ 1,000 ಕ್ಕೂ ಹೆಚ್ಚು ಐಟಿ ವೃತ್ತಿಪರರು ಸೇರಿ ರಚಿಸಿರುವ ಎಲಿಮೆಂಟ್ಸ್ ಆ್ಯಪ್, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಅವರ ಸುಮ್ಮುಖದಲ್ಲಿ ಬಿಡುಗಡೆಯಾಗಿದೆ. ಗೂಗಲ್ ಪ್ಲೇ ಸ್ಟೋರ್ ಸೇರಿದಂತೆ ಜಗತ್ತಿನ ಎಲ್ಲ ಆ್ಯಪ್ ಸ್ಟೋರ್‌ಗಳಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ. ಈಗಾಗಲೇ 2 ಲಕ್ಷ ಜನರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ.
ಆ್ಯಪ್ ಲಾಂಚ್ ವೇಳೆ ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್, ರಾಜ್ಯಸಭಾ ಸಂಸದ ಅಯೋಧ್ಯ ರಾಮಿ ರೆಡ್ಡಿ, ಮಾಜಿ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು, ಕರ್ನಾಟಕದ ಮಾಜಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಹಿಂದುಜಾ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಅಶೋಕ್ ಪಿ ಹಿಂದುಜಾ, ಜಿಎಂ ಗ್ರೂಪ್ ಸ್ಥಾಪಕರ ರಾವ್, ಜೆಎಸ್‌ಡಬ್ಲ್ಯೂ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್, ರಾಮೋಜಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ರಾಮೋಜಿ ರಾವ್ ಮತ್ತು ರಾಜ್ಯಸಭಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಉಪಸ್ಥಿತರಿದ್ದರು.
ಎಲಿಮೆಂಟ್ಸ್ ಆ್ಯಪ್ನ ಪ್ರಮುಖ ಲಕ್ಷಣಗಳು:
- ಅನಿಯಮಿತ ಉಚಿತ ಆಡಿಯೋ ಹಾಗೂ ವಿಡಿಯೋ ಕರೆಗಳು
- ಗ್ರೂಪ್ ಚಾಟ್
- 8ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಲಭ್ಯ
ಮುಂದಿನ ದಿನಗಳಲ್ಲಿ ಈ ಫೀಚರ್ಗಳು ಲಭ್ಯವಿರಲಿದೆ:
- ಆಡಿಯೋ / ವಿಡಿಯೋ ಕಾನ್ಫರೆನ್ಸ್ ಕರೆಗಳು
- ಎಲಿಮೆಂಟ್ಸ್ ಪೇ ಮೂಲಕ ಸುರಕ್ಷಿತ ಪಾವತಿ
- ಬಳಕೆದಾರರು ಅನುಸರಿಸುವ / ಚಂದಾದಾರರಾಗುವ ಪಬ್ಲಿಕ್ ಪ್ರೊಫೈಲ್‌ಗಳು
- ಭಾರತೀಯ ಬ್ರ್ಯಾಂಡ್‌ಗಳನ್ನು ಉತ್ತೇಜಿಸಲು ಕ್ಯುರೇಟೆಡ್ ವಾಣಿಜ್ಯ ವೇದಿಕೆ
- ಪ್ರಾದೇಶಿಕ ಧ್ವನಿ ಆಜ್ಞೆಗಳು
ಬಳಕೆದಾರರ ಡೇಟಾ ಮಾಹಿತಿಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಎಲಿಮೆಂಟ್ಸ್ ಅಪ್ಲಿಕೇಶನ್ ಅನ್ನು ರಚಿಸಲಾಗಿದೆ.